ADVERTISEMENT

ಮೋದಿ- ತೋರಿಕೆಯ

ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST

ಬೆಂಗಳೂರು:  `ಅಭಿವೃದ್ಧಿಯಲ್ಲಿ ಗುಜರಾತ್ ಸಾಕಷ್ಟು ಹಿಂದುಳಿದಿದ್ದರೂ ಅಭಿವೃದ್ಧಿ ಸಾಧಿಸಿರುವುದಾಗಿ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಾರೆ. ಅವರದು ಕೇವಲ ತೋರಿಕೆಯ ಅಭಿವೃದ್ಧಿ' ಎಂದು ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಹೇಳಿದರು.

ನಗರದ ಹಮೀದ್ ಶಾಹ್ ಸಂಕಿರ್ಣದಲ್ಲಿ ಕೋಮು ಸೌಹಾರ್ದ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ `ನರೇಂದ್ರ ಮೋದಿಯ ಗುಜರಾತ್ ಅಭಿವೃದ್ಧಿ ಮಾದರಿಯ ಮಿಥ್ಯಗಳೇನು?' ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಾ, ಗುಜರಾತ್‌ಗೆ ಹೋಲಿಸಿದರೆ ಮಹಾರಾಷ್ಟ್ರ, ಚತ್ತಿಸ್‌ಘಡ, ಓರಿಸ್ಸಾ, ಬಿಹಾರ, ಕರ್ನಾಟಕ ಅಭಿವೃದ್ಧಿಯಲ್ಲಿ ಸಾಕಷ್ಟು ಮುಂದಿವೆ ಎಂದು ಅಭಿಪ್ರಾಯಪಟ್ಟರು.

`ಗುಜರಾತ್ ಅಭಿವೃದ್ಧಿಯಲ್ಲಿ ತುಂಬಾ ಮುಂದುವರೆದಿದೆ, ಅದೊಂದು ಮಾದರಿ ರಾಜ್ಯ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ, ಸಂಶೋಧನಾ ವರದಿಗಳ ಅಂಕಿ ಅಂಶಗಳನ್ನೊಮ್ಮೆ  ಗಮನಿಸಿದರೆ ಇದು ಸಂಪೂರ್ಣ ಸುಳ್ಳು ಎಂಬುದು ಅರಿವಿಗೆ ಬರುತ್ತದೆ. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ ತೀರಾ ಹಿಂದುಳಿದಿದೆ. ಶಿಕ್ಷಣ, ಲಿಂಗಾನುಪಾತ ಹಾಗೂ ಆರ್ಥಿಕ ಪ್ರಗತಿಯಲ್ಲಿ ಕ್ರಮವಾಗಿ ಹದಿನೈದು, ಇಪ್ಪತ್ತು ಮತ್ತು ಐದನೇ ಸ್ಥಾನದಲ್ಲಿದೆ. ಇದನ್ನೆಲ್ಲ ಗಮನಿಸಿದರೆ ಗುಜರಾತ್ ಒಂದು ಮಾದರಿ ರಾಜ್ಯ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ' ಎಂದು ಅವರು ಹೇಳಿದರು.

ಯುನಿಸೆಫ್‌ನ ಇತ್ತೀಚಿನ ವರದಿ ಪ್ರಕಾರ ಅಪೌಷ್ಟಿಕತೆಯಿಂದ ಆಗುತ್ತಿರುವ ಶಿಶು ಮರಣ ಪ್ರಮಾಣದಲ್ಲಿ ಗುಜರಾತ್ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಗುಜರಾತಿನ ಇತರೆ ಬಡ ವರ್ಗಗಳಿಗೆ ಹೋಲಿಸಿದರೆ ಗ್ರಾಮೀಣ ಬಡ ಮುಸ್ಲಿಮರು ಇನ್ನೂರು ಪಟ್ಟು ಹಿಂದುಳಿದಿದ್ದಾರೆ ಎಂದು ಅವರು ತಿಳಿಸಿದರು.

`ಮೋದಿಯ ಮೂಲಕ ಪ್ರತಿಷ್ಠಿತ ಉದ್ಯಮಗಳು ಲಾಭ ಮಾಡಿಕೊಳ್ಳುವ ಹುನ್ನಾರದಲ್ಲಿವೆ. ಹೀಗಾಗಿ ಮೋದಿಯೇ ಮುಂದಿನ ಪ್ರಧಾನಿ ಎಂದು ಬಿಂಬಿಸುವಲ್ಲಿ ಇವು ಉತ್ಸುಕವಾಗಿವೆ. ಅಲ್ಲದೇ, ರಾಷ್ಟ್ರೀಯ ವಿದ್ಯುನ್ಮಾನ ಮಾಧ್ಯಮಗಳು ಮೋದಿಯ ಹಗರಣಗಳನ್ನು ತಿಳಿದಿದ್ದೂ ಅದನ್ನು ಬಯಲಿಗೆಳೆಯುವುದು ಬಿಟ್ಟು ಅವರ ಕುರಿತಾಗಿ ಹೆಚ್ಚು ಹೆಚ್ಚು ಚರ್ಚೆ ನಡೆಸಿ ಪ್ರಚಾರ ನೀಡುವ ಪ್ರಯತ್ನದಲ್ಲಿವೆ. ಇದೊಂದು ವ್ಯವಸ್ಥಿತ ಜಾಲ' ಎಂದು ಅವರು ಆರೋಪಿಸಿದರು.

ಒಟ್ಟಿನಲ್ಲಿ ಹೇಳಬೇಕೆಂದರೆ ಗುಜರಾತಿನಲ್ಲಿ ಮೋದಿ ಯಶಸ್ಸಿಗಿಂತ ಇತರರ ವೈಫಲ್ಯವೇ ಮೋದಿ ಪ್ರಭಾವ ಹೆಚ್ಚಲು ಕಾರಣ ಎಂದು ಅಭಿಪ್ರಾಯ ಪಟ್ಟರು. ವಿಚಾರ ಸಂಕಿರಣದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಮಾಜಿ ಶಾಸಕ ಡಾ.ಎಲ್.ಹನುಮಂತಯ್ಯ, ಪತ್ರಕರ್ತೆ ಗೌರಿ ಲಂಕೇಶ, ಸಂಘದ ಅಧ್ಯಕ್ಷ ಶಫಿವುಲ್ಲಾ, ಕಾರ್ಯದರ್ಶಿ ಕೆ.ಎಲ್.ಅಶೋಕ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT