ADVERTISEMENT

ಮೌಲ್ಯಾಧಾರಿತ ಶಿಕ್ಷಣ ಬೋಧಿಸಿ

ರಾಜ್ಯಪಾಲ ಹಂಸರಾಜ ಭಾರದ್ವಾಜ್ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಹೆಣ್ಣೂರು:  `ಆಧುನಿಕತೆ ಬೆಳೆದಂತೆ ಯುವಜನಾಂಗ ದಿಕ್ಕು ತಪ್ಪುತ್ತಿದೆ ಎಂಬ ಆತಂಕ ಎದುರಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಮಾಜಮುಖಿಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.

ಹೆಣ್ಣೂರು ಬಾಗಲೂರು ಮುಖ್ಯರಸ್ತೆಯ ಯುನೈಟೆಡ್ ಇಂಟರ್‌ನ್ಯಾಷನಲ್ ಶಾಲೆಯ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, `ಪ್ರಾಥಮಿಕ ಹಂತದಲ್ಲಿಯೇ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರು ಸಮರ್ಥರಿರಬೇಕು. ಸದೃಢ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಪಾಲುದಾರರಾಗಲು ಶಿಕ್ಷಕರ ಸಹಕಾರ ಅಗತ್ಯ. ಅವರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು' ಎಂದು ಹೇಳಿದರು.

`ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರ. ಅವರು ಸಮಾಜದ ಕೆಳಸ್ತರದ ಮಕ್ಕಳಿಗೂ ಅವಕಾಶ ನೀಡಬೇಕು. ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಅವಕಾಶ ನೀಡಿ ಅವರು ಇತರರಂತೆ ಕಲಿಯಲು ವಾತಾವರಣ ನಿರ್ಮಿಸಬೇಕು' ಎಂದು ಕಿವಿಮಾತು ಹೇಳಿದರು.

ಶಾಲೆಯ ಸ್ಥಾಪಕ ಅಧ್ಯಕ್ಷ ಜಾನ್ ಪೀಟರ್ ಕಿರುಬಾಗರನ್, `ನಿರ್ಗತಿಕರು ಮತ್ತು ಬಡ ಕುಟುಂಬದ 100 ಮಕ್ಕಳನ್ನು ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡು ಎಸ್ಸೆಸ್ಸೆಲ್ಸಿವರೆಗೂ ಊಟ, ವಸತಿಯನ್ನು ನೀಡಲಾಗುತ್ತಿದೆ. ಬಳಿಕ ಅವರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುವುದು' ಎಂದರು.

ಪ್ರಾಂಶುಪಾಲರಾದ ಚಿತ್ರಾ ಮೋನಿ ವರದಿ ಮಂಡಿಸಿದರು. 17 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗಮನಾರ್ಹ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗೌರವಿಸಲಾಯಿತು. ಆಡಳಿತಾಧಿಕಾರಿ ರಜನಿ ಅಲೆಕ್ಸಾಂಡರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.