ಬೆಂಗಳೂರು: ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಂಡಿಸಿರುವುದು, ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಪೂರಕವಲ್ಲದ, ಯಥಾಸ್ಥಿತಿವಾದಿ ಬಜೆಟ್ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಟೀಕಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಪ್ರಯತ್ನ ಈ ಬಜೆಟ್‌ನಲ್ಲಿ ಆಗಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ರಸಗೊಬ್ಬರ, ಇಂಧನ ಮತ್ತು ಆಹಾರ ಪದಾರ್ಥಗಳ ಮೇಲಿನ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ 50 ಕೋಟಿ ರೂಪಾಯಿ ಧನಸಹಾಯ ನೀಡುವ ವಿತ್ತ ಸಚಿವರ ನಿರ್ಧಾರವನ್ನು ಮುಖ್ಯಮಂತ್ರಿಗಳು ಸ್ವಾಗತಿಸಿದ್ದಾರೆ.
ರಾಜ್ಯದ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ರೇಷ್ಮೆ ಆಮದು ಸುಂಕವನ್ನು ಹೆಚ್ಚಿಸಬೇಕು ಮತ್ತು ರೇಷ್ಮೆ ಬೆಳೆಗಾರರಿಗೆ ಪ್ಯಾಕೇಜ್ ನೀಡಬೇಕು ಎಂದು ಕೋರಲಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜ್ಯಕ್ಕೆ ನಿರಾಸೆ ತಂದಿದೆ. ರಾಜ್ಯದ ಅನಿಲ ಆಧಾರಿತ ವಿದ್ಯುತ್ ಯೋಜನೆಗಳಿಗೆ ಅನಿಲ ಹಂಚಿಕೆ ಮಾಡುವ ಬಗ್ಗೆಯೂ ಕೇಂದ್ರ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಮತ್ತು ಸೇವಾ ತೆರಿಗೆಯನ್ನು ಶೇಕಡ 2ರಷ್ಟು ಹೆಚ್ಚಿಸುವ ನಿರ್ಧಾರದಿಂದ ಹಣದುಬ್ಬರ ಇನ್ನಷ್ಟು ಹೆಚ್ಚಾಗಿ, ಮಧ್ಯಮ ವರ್ಗ ಮತ್ತು ಬಡ ಜನತೆಗೆ ಹೊರೆಯಾಗಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣಕ್ಕೂ ಸಚಿವರು ಮುಂದಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಯ ಕಡೆಗೂ ಕೇಂದ್ರ ಅಗತ್ಯ ಗಮನ ನೀಡಿಲ್ಲ. ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸೂಕ್ತ ನೆರವು ನೀಡದಿರುವುದು ನಿರಾಸೆ ಮೂಡಿಸಿದೆ. ವಿತ್ತೀಯ ಕೊರತೆ ಹೆಚ್ಚುತ್ತಿರುವುದನ್ನೇ ನೆಪ ಮಾಡಿಕೊಂಡು, ಸಹಾಯಧನ ಪ್ರಮಾಣ ಕಡಿತಗೊಳಿಸುವ ನಿರ್ಧಾರದಿಂದ ರೈತರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಸದಾನಂದ ಗೌಡರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ದೊರಕಿಸಿಕೊಡುವುದಾಗಿ ಹೇಳಲಾಗಿದೆ. ಆದರೆ 2014-15ರೊಳಗೆ ಪೂರ್ಣಗೊಳ್ಳಲಿರುವ ಎಲ್ಲ ಯೋಜನೆಗಳಿಗೂ ಈ ಸೌಲಭ್ಯ ದೊರೆಯಲಿದೆಯೇ ಎಂಬ ಬಗ್ಗೆ ಸ್ಪಷ್ಟ ಭರವಸೆ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮಟ್ಟಿಗೆ ಈ ಬಜೆಟ್ ನಿರಾಸೆಯನ್ನೇ ತಂದಿದೆ. ರಾಜ್ಯಗಳ ತೆರಿಗೆ ಪಾಲು 2,63,458 ಕೋಟಿ ರೂಪಾಯಿ ಎಂದು 2011-12ರ ಕೇಂದ್ರ ಬಜೆಟ್ ಅಂದಾಜಿನಲ್ಲಿ ಹೇಳಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನಲ್ಲಿ ಈ ಮೊತ್ತವನ್ನು 2,55,414 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ.
ಇದರಿಂದ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಿಗೆ ಕೇಂದ್ರದಿಂದ ಬರುತ್ತಿದ್ದ ಅನುದಾನ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿ ಅಸಮಾಧಾನ ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.