ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ನೂತನ ರನ್‌ವೇ ಹಾಗೂ ಈಗಿರುವ ರನ್‌ವೇ ಉನ್ನತೀಕಣದ ಶೀಘ್ರವೇ ಆಗಬೇಕಾಗಿದ್ದು, ಈ ವಿಚಾರದಲ್ಲಿ ಸಂದಿಗ್ಧತೆ ತಲೆದೋರಿದೆ.
ಈಗ ಪ್ರತಿ ಗಂಟೆಗೆ 30 ವಿಮಾನ ಹಾರಾಟವನ್ನು 4 ಸಾವಿರ ಮೀಟರ್ ಉದ್ದವಿರುವ ರನ್‌ವೇನಲ್ಲಿ ನಿಭಾಯಿಸಲು ಸಾಮರ್ಥ್ಯವಿಲ್ಲ. ಹೀಗಾಗಿ ವಿಸ್ತಾರವಾದ ಎರಡನೇ ರನ್ ವೇ ನಿರ್ಮಾಣಕ್ಕಾಗಿ 2017–18 ರವರೆಗೆ ಕಾಯುವುದು ಕಷ್ಟವಾಗುತ್ತದೆ. ಈಗಿರುವ ವಿಮಾನಗಳ ಹಾರಾಟ ಹೆಚ್ಚಾಗುತ್ತಿದ್ದು, ಪ್ರತಿ ಗಂಟೆಗೆ 46 ವಿಮಾನಗಳ ಹಾರಾಟಕ್ಕೆ ಹೆಚ್ಚಿಸಲೂ ಈಗಿರುವ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲದಂತಾಗಿದೆ.
ಕೆಐಎಯಲ್ಲಿನ ರನ್‌ವೇ ಸಾಮರ್ಥ್ಯ ಯಲಹಂಕ ಮತ್ತು ಎಚ್‍ಎಎಲ್ ವಿಮಾನ ನಿಲ್ದಾಣದಷ್ಟೇ ಇದೆ. ಇದು ಸಾಕಷ್ಟು ಅಗಲ ಇಲ್ಲದೆ ಇರುವುದರಿಂದ ಬಹುದೊಡ್ಡದಾದ ಏರ್‌ಬಸ್ 380 ವಿಮಾನ ಬೆಂಗಳೂರಿನಲ್ಲಿ ಇಳಿಯುವ ಅವಕಾಶದಿಂದ ವಂಚಿತವಾಗಬೇಕಿದೆ.
ಪ್ರಸ್ತಾವಿತ ಹೊಸ ಕೋಡ್ ಎಫ್ ರನ್‌ವೇ ಏರ್‌ಬಸ್ 380ರ ಇಳಿಯುವ ವ್ಯವಸ್ಥೆ ಹೊಂದಿದೆ. ಹೊಸ ರನ್‌ವೇ ನಿರ್ಮಾಣಕ್ಕೆ ಜನವರಿಯಲ್ಲಿ ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತಿರುವುದರಿಂದ ಏರ್‌ಬಸ್ 380ರ ಕಾರ್ಯಾಚರಣೆಗೆ ಅವಕಾಶ ಕಲ್ಪಿಸುವಂತೆ ಬಹಳಷ್ಟು ವಿಮಾನ ಸೇವಾ ಕಂಪೆನಿಗಳು ಕೆಐಎಗೆ ಬೇಡಿಕೆ ಸಲ್ಲಿಸಿವೆ.
ಆದರೆ ‘ಕೋಡ್ – ಎಫ್’ ರನ್‌ವೇ ಆಗುವವರೆಗೆ ಈಗಿರುವ ರನ್‌ವೇನಲ್ಲಿ ಇದಕ್ಕೆ ಒಪ್ಪಿಗೆ ನೀಡದಿರಲು ಕೆಐಎ ನಿರ್ಧರಿಸಿದೆ. ಏರ್‌ಬಸ್ 380ರ ಸೇವೆಗೆ ಅವಕಾಶ ನೀಡಿದರೆ ಇತರೆ ವಿಮಾನಗಳ ಕಾರ್ಯಾಚರಣೆಯ ಈಗಿರುವ ರನ್‌ವೇ ಸ್ಥಗಿತಗೊಳಿಸಬೇಕಾಗುತ್ತದೆ ಎಂಬ ಕಾರಣದಿಂದ ಏರ್‌ಬಸ್ 380ರ ಸೇವೆಗೆ ಅನುಮತಿ ನೀಡದಿರಲು ಕೆಐಎ ತೀರ್ಮಾನಿಸಿದೆ.
ಮೇಲ್ದರ್ಜೆಗೆ : ಗಂಟೆಗೆ 30 ವಿಮಾನಗಳ ಕಾರ್ಯಾಚರಣೆ ನಡೆಸುತ್ತಿರುವ ಪ್ರಸ್ತುತ ರನ್‌ವೇಯಿಂದ ಪ್ರತಿವರ್ಷ 12.9 ಕೋಟಿ ಪ್ರಯಾಣಿಕರು ಕೆಐಎಯಿಂದ ಪ್ರಯಾಣಿಸಿದ್ದಾರೆ. ಸಮಾನಾಂತರ ಟ್ಯಾಕ್ಸಿವೇ ಮತ್ತು ಮೂರು ತ್ವರಿತ ನಿರ್ಗಮನದ ಟ್ಯಾಕ್ಸಿವೇ ಹೊಂದಿರುವ 45 ಮೀಟರ್ ಅಗಲದ ರನ್‌ವೇ ನಿಲ್ದಾಣದಲ್ಲಿದೆ.
ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ಏಳರಿಂದ ಮೂರು ನಾಟಿಕಲ್ ಮೈಲುಗಳಿಗೆ ಇಳಿಸುವ ಮೂಲಕ ರನ್‌ವೇ ಮೇಲ್ದರ್ಜೆಗೇರಿಸಬೇಕಿದೆ. ವೈಮಾನಿಕ ನಿರ್ವಹಣಾ ವ್ಯವಸ್ಥೆಯ ಕಾರ್ಯಾಚರಣೆಯನ್ನು ಸುಧಾರಿಸಬೇಕಿದೆ. ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಭಾರತೀಯ ವಾಯುಸೇನೆ ಮತ್ತು ಎಚ್‍ಎಎಲ್ ಸಹಭಾಗಿತ್ವದಲ್ಲಿ ನಿಲ್ದಾಣದ ಸುಧಾರಣೆಗೆ ಕೆಐಎ ಚಿಂತಿಸಿದೆ. ಆದರೆ, ಈ ಯೋಜನೆ ತಕ್ಷಣಕ್ಕೆ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಎರಡನೇ ರನ್‌ವೇ 2017-–18ರ ಹೊತ್ತಿಗೆ ಸೇವೆಗೆ ದೊರೆಯಲಿದೆ ಎನ್ನುತ್ತಾರೆ ನಿಲ್ದಾಣದ ಅಧಿಕಾರಿಗಳು.
ಬೃಹತ್ ವಿಮಾನ ಸೇವೆ
ಸದ್ಯ ಕೆಐಎಯಲ್ಲಿರುವ ರನ್‌ವೇಯಿಂದ ವರ್ಷಕ್ಕೆ ಎರಡು ಕೋಟಿ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಿದೆ. ಬೃಹತ್ ವಿಮಾನಗಳ ಸೇವೆ ಆರಂಭವಾದರೆ ಈಗಿರುವ ಕಾರ್ಯಾಚರಣೆಗಿಂತ ಶೇ 7ರಷ್ಟು ಮಾತ್ರ ವೈಮಾನಿಕ ಸಂಚಾರ ಹೆಚ್ಚಾಗಲಿದೆ. ಈಗಿರುವ ಸಾಧ್ಯತೆಗಳ ಪ್ರಕಾರ ಒಂದು ವಿಮಾನದಲ್ಲಿ ಸರಾಸರಿ 115 ಪ್ರಯಾಣಿಕರು ನಿಲ್ದಾಣದ ಮೂಲಕ ಪ್ರಯಾಣಿಸಲು ಅವಕಾಶವಿದೆ. ಆದರೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದು ವಿಮಾನದಲ್ಲಿ ಸರಾಸರಿ 130 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
ಈಗಿರುವ ರನ್‌ವೇಯನ್ನು ಮೇಲ್ದರ್ಜೆಗೇರಿಸುವುದರಿಂದ ವಿಮಾನಗಳ ಸಂಚಾರ ಹಾಗೂ ನಿಲುಗಡೆಗೆ ಯಾವುದೇ ತೊಂದರೆಯಾ ಗುವುದಿಲ್ಲ. ದಕ್ಷಿಣದಲ್ಲಿನ ನೂತನ ಸಮಾನಾಂತರ ರನ್‌ವೇ (ಎರಡನೇ ರನ್‌ವೇ) ಸೇವೆಗೆ ಲಭ್ಯವಾದರೆ ಈಗ ಸದ್ಯ ಇರುವ ರನ್‌ವೇಯನ್ನು ಮೇಲ್ದರ್ಜೆಗೇರಿಸಬಹುದು. ಆದರೆ, ಚಳಿಗಾಲದಲ್ಲಿ ಮಂಜಿನಿಂದ ವಿಮಾನಗಳ ಸಂಚಾರಕ್ಕೆ ಸ್ವಲ್ಪ ಅಡಚಣೆಯ ಸಾಧ್ಯತೆ ಇದೆ.
ಹೆಚ್ಚುವರಿ ರನ್‌ವೇ ನಿರ್ಮಾಣವಾದರೆ ಕೆಐಎಗೆ ವಾಯುವ್ಯಾಪ್ತಿ (ಏರ್‌ಸ್ಪೇಸ್) ನಿರ್ಬಂಧದ ಸಾಧ್ಯತೆಗಳೂ ಇವೆ. ಏಕೆಂದರೆ, ಸದ್ಯ ಕೆಐಎ ಪಶ್ಚಿಮದಲ್ಲಿ ಯಲಹಂಕ ಏರ್‌ಸ್ಪೇಸ್ ಹಾಗೂ ದಕ್ಷಿಣದಲ್ಲಿ ಎಚ್‍ಎಎಲ್ ಏರ್‌ಸ್ಪೇಸ್ ಬಳಸಿಕೊಳ್ಳುತ್ತಿದೆ. ಸದ್ಯ ಕೆಐಎ ಮತ್ತು ಯಲಹಂಕ ವಾಯುನೆಲೆಯ ನಡುವಿನ ಅಂತರ ಮೂರು ನಾಟಿಕಲ್ ಮೈಲಿ ಇದೆ. ದಕ್ಷಿಣದಲ್ಲಿ 1.5 ಕಿ.ಮೀ ಅಂತರದಲ್ಲಿ ಹೊಸ ರನ್‌ವೇ ನಿರ್ಮಾಣವಾದರೆ ಈ ಅಂತರ ಎರಡು ನಾಟಿಕಲ್ ಮೈಲಿಗೆ ಇಳಿಯಲಿದೆ.
ಮುಖ್ಯಾಂಶಗಳು
*ವೈಮಾನಿಕ ನಿರ್ವಹಣಾ ವ್ಯವಸ್ಥೆ ಅಭಿವೃದ್ಧಿ ಪಡಿಸುವುದು
*ರನ್‌ವೇಯಲ್ಲಿ ವಿಮಾನಗಳ ಕಾರ್ಯಾಚರಣೆ ಹೆಚ್ಚಳಕ್ಕೆ ತ್ವರಿತ ನಿರ್ಗಮನ ಟ್ಯಾಕ್ಸಿ ವೇ ಹೆಚ್ಚಿಸುವುದು
*ನಿಲ್ದಾಣದ ಮೂಲಕ ವಾರ್ಷಿಕ ಎರಡು ಕೋಟಿ ಪ್ರಯಾಣಿಕರು ಪ್ರಯಾಣಿಸುವಂತೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.