ADVERTISEMENT

ರಸ್ತೆ ಮಧ್ಯೆ ಇಂಗು ಗುಂಡಿಗಳ ನಿರ್ಮಾಣ:ನೂತನ ಪದ್ಧತಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST

ಬೆಂಗಳೂರು:  ಮಳೆಗಾಲದಲ್ಲಿ ಸುರಿಯುವ ನೀರು ವ್ಯರ್ಥವಾಗಿ ಚರಂಡಿಗಳ ಮೂಲಕ ಹರಿದು ಹೋಗುವುದನ್ನು ತಪ್ಪಿಸಿ ಸುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದಕ್ಕೆ ಪೂರಕವಾಗಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಗಾಯತ್ರಿನಗರ ವಾರ್ಡ್‌ನಲ್ಲಿ ರಸ್ತೆ ಮಧ್ಯೆ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ವಿನೂತನ ರೀತಿಯಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 60/40 ಚದರ ಅಡಿ ಹಾಗೂ ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಲು ಇನ್ನೂ ಸಾಧ್ಯವಾಗದಿರುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರನ್ನು ಇಂಗಿಸುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಗಾಯತ್ರಿ ನಗರ ಎಲ್ಲರ ಗಮನಸೆಳೆದಿದೆ.

ಮಳೆ ನೀರು ಹೆಚ್ಚು ಹರಿಯುವ ತಗ್ಗು ಪ್ರದೇಶಗಳ ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಮೂರು ಕಡೆಗಳಲ್ಲಿ ಪ್ರಾಯೋಗಿಕವಾಗಿ ಇಂತಹ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಇಂಗು ಗುಂಡಿಯ ಸುತ್ತಲೂ ಜಲ್ಲಿ ಮತ್ತು ಮರಳನ್ನು ತುಂಬಲಾಗಿದೆ. ರಸ್ತೆಯ ಇಕ್ಕೆಲಗಳ ಚರಂಡಿ ನೀರು ಸೇರುವ ಹಾಗೆ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಸುಮಾರು 20 ಅಡಿ ಆಳದ ಇಂಗು ಗುಂಡಿಗಳಲ್ಲಿ ಒಂದರ ಮೇಲೊಂದರಂತೆ ಸಿಮೆಂಟ್ ರಿಂಗ್‌ಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು `ರಿಂಗ್~ ಮಧ್ಯೆ ನೀರು ಇಂಗಲು ಅಲ್ಪ ಜಾಗ ಬಿಡಲಾಗಿದೆ.

ಇದರಿಂದ ಗುಂಡಿಯಿಂದ ರಿಂಗ್‌ಗಳ ಮೂಲಕ ಹೊರ ಹೋಗುವ ನೀರು ಹೆಚ್ಚಿನ ಪ್ರಮಾಣದಲ್ಲಿ ಇಂಗಲು ಸಹಕಾರಿಯಾಗಲಿದೆ. ಅಲ್ಲದೆ, ಗುಂಡಿ ಭರ್ತಿಯಾದ ನಂತರ ಮಳೆ ನೀರು ಚರಂಡಿ ಮೂಲಕವೇ ಹೊರ ಹೋಗಲು ವ್ಯವಸ್ಥೆ ಮಾಡಲಾಗಿದೆ. `ಪ್ರತಿ ಇಂಗು ಗುಂಡಿಗಳು ಒಂದು ಬಾರಿಗೆ 8ರಿಂದ 10 ಸಾವಿರ ಲೀಟರ್‌ಗಳಷ್ಟು ನೀರನ್ನು ಹೀರುವ ಸಾಮರ್ಥ್ಯ ಹೊಂದಿವೆ. ಮಳೆಗಾಲದಲ್ಲಿ ಪ್ರತಿ ದಿನ ಬಿಡುವು ಕೊಟ್ಟು ಮಳೆ ಸುರಿದರೆ ಈ ಗುಂಡಿಗಳು ಮೂರು ಬಾರಿ ನೀರನ್ನು ಹೀರಲಿವೆ.

ಹೀಗಾಗಿ ದಿನಾಲೂ 30ರಿಂದ 35 ಸಾವಿರ ಲೀಟರ್ ನೀರನ್ನು ಇಂಗಿಸಬಹುದು. ವರ್ಷಕ್ಕೆ 15 ಬಾರಿ ಮಳೆ ಸುರಿದರೂ 4ರಿಂದ 5 ಲಕ್ಷ ಲೀಟರ್ ನೀರು ಇಂಗಿಸಬಹುದು~ ಎನ್ನುತ್ತಾರೆ ಗಾಯಿತ್ರಿ ನಗರ ವಾರ್ಡ್‌ನ ಸದಸ್ಯೆ ಚೇತನಾಗೌಡ ಅವರ ಪತಿ ಪ್ರಫುಲ್ಲಚಂದ್ರ. `ಎರಡು ವರ್ಷಗಳಿಂದ ಈ ಉದ್ದೇಶಕ್ಕಾಗಿ ಪಾಲಿಕೆ ಅನುದಾನ ಒದಗಿಸುತ್ತಿದ್ದರೂ ಬಹಳಷ್ಟು ಸದಸ್ಯರು ಸದ್ಬಳಕೆ ಮಾಡಿಕೊಳ್ಳಲಿಲ್ಲ.

ಪ್ರಾಯೋಗಿಕವಾಗಿ ಮೂರು ಕಡೆ ಇಂಗು ಗುಂಡಿ ನಿರ್ಮಿಸಲಾಗಿದೆ. ನಾನೇ ಸ್ವಂತ ಕೆಲಸ ಮಾಡಿಸಿದ್ದರಿಂದ ಪ್ರತಿ ಇಂಗು ಗುಂಡಿಗೆ 72ರಿಂದ 79 ಸಾವಿರ ರೂಪಾಯಿ ಖರ್ಚಾಗಿದೆಯಷ್ಟೇ~ ಎಂದು ಮಾಹಿತಿ ನೀಡಿದರು. `ಇಂಗು ಗುಂಡಿಗಳ ಮೇಲ್ಭಾಗದಲ್ಲಿ ಜಾಲರಿ ಅಳವಡಿಸಲಿರುವುದರಿಂದ ಕಸ ಕಡ್ಡಿ ಸೇರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ಅಡ್ಡಿಯಾಗದಂತೆ ಗುಂಡಿ ಮುಚ್ಚಲಾಗಿದೆ~ಎಂದರು ಹೇಳಿದರು.

ದೋಭಿ ಘಾಟ್‌ನಲ್ಲೂ: ಇದೇ ರೀತಿ, ಮಲ್ಲೇಶ್ವರದ ಈಜುಕೊಳ ಬಡಾವಣೆ ದೋಭಿ ಘಾಟ್‌ನಲ್ಲೂ ಮಳೆ ನೀರು ಸದ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಚರಂಡಿಗೆ ನೇರವಾಗಿ ಪೈಪುಗಳನ್ನು ಅಳವಡಿಸುವ ಮೂಲಕ ನೀರನ್ನು ಬಾವಿಗೆ ಬಿಡಲಾಗುತ್ತಿದೆ. ಬಾವಿಯಿಂದ ಮೂರ‌್ನಾಲ್ಕು ತೊಟ್ಟಿಗಳಿಗೆ ನೀರು ಸಾಗಲು ಮತ್ತೆ ಕೊಳವೆಗಳನ್ನು ಅಳವಡಿಸಲಾಗಿದೆ.

ಬಾವಿ ಮುಕ್ಕಾಲು ಭಾಗ ತುಂಬಿದ ನಂತರ ನೀರು ತೊಟ್ಟಿಗೆ ಹರಿಯಲಿದೆ. ಈ ನೀರನ್ನು ಹಂತ-ಹಂತವಾಗಿ ಶುದ್ಧೀಕರಿಸಿ ನಂತರ ದೋಭಿ ಘಾಟ್‌ನಲ್ಲಿ ಬಟ್ಟೆ ಒಗೆಯುವುದಕ್ಕಾಗಿ ಬಳಸಲಾಗುತ್ತದೆ. ಇದೇ ರೀತಿ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ 25 ಕಡೆಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಸಾರ್ವಜನಿಕ ಕಟ್ಟಡ, ಮೈದಾನ, ಉದ್ಯಾನಗಳಲ್ಲೂ ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.