ADVERTISEMENT

ರಾಜಕೀಯ ತಂತ್ರಗಾರಿಕೆ ತಿಳಿದಿಲ್ಲ - ಡಾ. ನಲ್ಲೂರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2012, 18:40 IST
Last Updated 19 ಮೇ 2012, 18:40 IST

ಬೆಂಗಳೂರು: `ನನ್ನೊಳಗೆ ಕೃಷಿಕ, ಜಾನಪದ ತಜ್ಞ, ಸಂಘಟಕ, ಅಧ್ಯಾಪಕ ಮತ್ತು ರಾಜಕಾರಣಿ ಇದ್ದಾನೆ. ಆದರೆ ಪ್ರಸ್ತುತ ದಿನಗಳಲ್ಲಿ ರಾಜಕೀಯ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಿರುವ ತಂತ್ರಗಾರಿಕೆ ನನ್ನಲ್ಲಿ ಉಳಿದಿಲ್ಲ~ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಆರ್.ಕೆ.ನಲ್ಲೂರು ಪ್ರಸಾದ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಮಾತುಕತೆ~ ಕಾರ್ಯಕ್ರಮದಲ್ಲಿ ಅವರು ಮನದಾಳದ ಮಾತುಗಳನ್ನು ಹಂಚಿಕೊಂಡರು.

`ನನ್ನಪ್ಪನಿಗೆ ನಾನು ವೈದ್ಯನಾಗಬೇಕು ಎಂಬ ಆಸೆಯಿತ್ತು. ಆದರೆ ಪಿಯುಸಿಯಲ್ಲಿ ಕನ್ನಡ ವಿಷಯವನ್ನು ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೆ. ಇದರಿಂದ ಬೇಸರಗೊಂಡ ಅಪ್ಪ ದನ ಕಾಯಲು ಬಿಟ್ಟರು. ಈ ಸಂದರ್ಭದಲ್ಲಿಯೇ ಬಸವಣ್ಣ, ಸರ್ವಜ್ಞ ಪದ್ಯಗಳನ್ನು ಕಲಿಯಲಾರಂಭಿಸಿದೆ. ನನ್ನ ಓರಗೆಯ ಮಕ್ಕಳೆಲ್ಲ ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆಯಲ್ಲಿದ್ದರು~ ಎಂದು ನೆನಪಿಸಿಕೊಂಡರು.

`ಅಪ್ಪಟ್ಟ ಗಾಂಧಿವಾದಿಯಾಗಿದ್ದ ಅಪ್ಪನಿಗೆ ಕಲಾ ವಿಭಾಗದಲ್ಲಿ ಕನ್ನಡ ಐಚ್ಛಿಕ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಶ್ರವಣಬೆಳಗೊಳದ ಕಾಲೇಜಿನಲ್ಲಿ ಕನ್ನಡ ಐಚ್ಛಿಕ ತೆಗೆದುಕೊಳ್ಳುವಂತೆ ಪಟ್ಟು ಹಿಡಿದಾಗ ಪ್ರಾಂಶುಪಾಲರಾದ ಬ್ರಹ್ಮಪ್ಪ ಅವರು ನನ್ನನ್ನು ಪ್ರೋತ್ಸಾಹಿಸಿದ್ದರು. ನಂತರ `ಕನ್ನಡಕ್ಕೆ ಚಿನ್ನದಂತಹ ಮಗನನ್ನು ನೀಡಿರುವೆ. ಇವನನ್ನು ಉತ್ತಮ ರೀತಿಯಲ್ಲಿ ರೂಪಿಸಿ ನಿನ್ನ ಕೊರಳಿಗೆ ಪದಕ ಮಾಡುವೆ~ ಎಂದು ಪ್ರಾಂಶುಪಾಲರು ನನ್ನ ತಂದೆಗೆ ಪತ್ರ ಬರೆದಿದ್ದರು~ ಎಂದು ನೆನಪಿಸಿಕೊಂಡು ಭಾವುಕರಾದರು.

`ಪರಿಷತ್ತಿನ ಅಧ್ಯಕ್ಷನಾಗುವ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಹತ್ತು ಅಂಶಗಳನ್ನು ಈಡೇರಿಸಿದ್ದೇನೆ. ಆದರೆ ನಗರದಲ್ಲಿ 5 ಎಕರೆ ಜಾಗದಲ್ಲಿ ಪರಿಷತ್ತಿನ ಶತಮಾನೋತ್ಸವ ಕಟ್ಟಡ ನಿರ್ಮಿಸಿ ಅದರಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಗ್ರಂಥಾಲಯ, ಮುದ್ರಣ, ಚಿತ್ರಮಂದಿರವನ್ನು ರೂಪಿಸಬೇಕೆಂಬ ಆಸೆಯಿತ್ತು. ಆದರೆ ಅದನ್ನು ಈಡೇರಿಸಲು ಸಾಧ್ಯವಾಗಲಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದ ಅವರು, `ಪರಿಷತ್ತಿನಲ್ಲಿ ಮಹಿಳಾ ಮೀಸಲಾತಿ ಕುರಿತ ನಿಬಂಧನೆಗಳಲ್ಲಿ ತಿದ್ದುಪಡಿ ತರುವಂತೆ ಚರ್ಚೆ ನಡೆಸುತ್ತೇನೆ. ನಿವೃತ್ತಿಯ ನಂತರವೂ ಕನ್ನಡ ಕಟ್ಟುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇನೆ~ ಎಂದು ಹೇಳಿದರು.

`ಜೆಪಿ ಚಳವಳಿಯ ಸಂದರ್ಭದಲ್ಲಿ ಅಪ್ಪ ಮತ್ತು ನಾನು ಇಬ್ಬರು ವಿಭಿನ್ನ ಪಕ್ಷದಲ್ಲಿ ಗುರುತಿಸಿಕೊಂಡಿದ್ದೆವು. ವಿಜ್ಞಾನ ಮತ್ತು ಕಲಾ ವಿಷಯವನ್ನು ಆಯ್ದುಕೊಳ್ಳುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಅಪ್ಪ ಮತ್ತು ನನ್ನ ನಡುವೆ ತೀವ್ರ ತಿಕ್ಕಾಟ ನಡೆದಿತ್ತು. ಆದರೆ ಆದರ್ಶವಾದಿಯಾಗಿದ್ದ ಅಪ್ಪನ ಕನಸಿನಂತೆ ಬದುಕು ಕಟ್ಟಿಕೊಂಡಿರುವುದಕ್ಕೆ ತೃಪ್ತಿ ಇದೆ~ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಉಪಸ್ಥಿತರಿದ್ದರು.

ದ್ವೇಷ ಬಿತ್ತುವ ಕಾರ್ಯ...

`ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯು ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಕನ್ನಡ ಮತ್ತು ಮರಾಠಿ ಭಾಷಿಗರ ನಡುವೆ ದ್ವೇಷ ಬಿತ್ತುವ ಕಾರ್ಯ ನಡೆಸುತ್ತಿದೆ~ ಎಂದು ಡಾ. ಆರ್.ಕೆ.ನಲ್ಲೂರು ಪ್ರಸಾದ್ ದೂರಿದರು.

`ಮಠಾರ ಸಮ್ಮೇಳನ ನಡೆಸಿದಾಕ್ಷಣ ಗಡಿನಾಡ ಕನ್ನಡಿಗರ ಸ್ವಾಭಿಮಾನಕ್ಕೆ ಯಾವುದೇ ತೊಂದರೆ ಉಂಟಾಗದು~ ಎಂದು ಪ್ರತಿಕ್ರಿಯಿಸಿದರು.

ಕನ್ನಡದ ಅಸ್ತಿತ್ವದ ಬಗ್ಗೆ ಕಾಸರಗೋಡಿನಲ್ಲಿ ದನಿ ಎತ್ತಿದ ಕಯ್ಯಾರ ಕಿಞಣ್ಣ ರೈ ಅವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತು ಗೌರವ ನೀಡಿದೆಯೇ ಎಂಬ ಸಭಿಕರ ಪ್ರಶ್ನೆಗೆ, ` ಪರಿಷತ್ತಿನ ಅಧ್ಯಕ್ಷನಾಗಿ ಕೆಲವೇ ದಿನಗಳಲ್ಲಿ ಕಾಸರಗೋಡಿನಲ್ಲಿರುವ ರೈ ಅವರನ್ನು ಭೇಟಿ ನೀಡಿ ಅವರನ್ನು ಸನ್ಮಾನಿಸಿದ್ದೆ. ಪರಿಷತ್ತಿಗಿರುವಂತಹ ಅಧಿಕಾರ ಮಿತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ~ ಎಂದು ಹೇಳಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.