ADVERTISEMENT

ರಾಜಧಾನಿಯಲ್ಲಿ `ಕ್ರಿಸ್‌ಮಸ್' ಸಡಗರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಬೆಂಗಳೂರು: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್ ಅನ್ನು ನಗರದೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳ್ಳಂಬೆಳಿಗ್ಗೆಯೇ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತ ಬಾಂಧವರು ಏಸುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಗೆಯ ಬಗೆಯ ಹೊಸ ಉಡುಗೆಗಳನ್ನು ತೊಟ್ಟಿದ್ದ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ವಿವೇಕನಗರದಲ್ಲಿರುವ ಬಾಲಯೇಸು, ಶಿವಾಜಿನಗರದಲ್ಲಿನ ಬೆಸಿಲಿಕಾ ಹಾಗೂ ಹಡ್ಸನ್ ವೃತ್ತದಲ್ಲಿರುವ ಚರ್ಚ್‌ಗಳಲ್ಲಿ ಕ್ರೈಸ್ತರಿಂದ ಸಾಮೂಹಿಕ ಪ್ರಾರ್ಥನೆ ಜರುಗಿತು. ಸಾಂಟಾಕ್ಲಾಸ್ ವೇಷಧಾರಿಗಳು ಚರ್ಚ್‌ನ ಆವರಣದಲ್ಲಿದ್ದ ಭಕ್ತಾದಿಗಳಿಗೆ ಬಗೆಬಗೆಯ ಉಡುಗೊರೆಗಳನ್ನು ನೀಡಿದರು.

ಕ್ರಿಸ್‌ಮಸ್ ಹಬ್ಬಕ್ಕೆಂದು ಸಿದ್ಧಪಡಿಸಿದ ಸಾಂಪ್ರದಾಯಿಕ ಹೂಗಳು ಮತ್ತು ತೂಗುದೀಪಗಳನ್ನು ಮನೆಗಳಲ್ಲಿ ಇರಿಸುವ ಮೂಲಕ ಹಬ್ಬಕ್ಕೆ ವಿಶೇಷ ಮೆರುಗನ್ನು ನೀಡಲಾಗಿತ್ತು. ಯೇಸುವಿನ ಜೀವನಗಾಥೆಯನ್ನು ಸಾರುವ ಬೊಂಬೆಗಳನ್ನು ಮನೆಯಲ್ಲಿಟ್ಟು ಪೂಜಿಸಲಾಯಿತು. ಮನೆಗೆ ಬಂದ ಅತಿಥಿಗಳಿಗೆ ಕ್ರಿಸ್‌ಮಸ್ ಕೇಕ್ ಹಾಗೂ ವೈನ್ ವಿತರಿಸಲಾಯಿತು.

ಹಬ್ಬಕ್ಕೆಂದೇ ತಯಾರಾದ ಚಿಕನ್, ಮಟನ್ ಬಿರಿಯಾನಿ, ಸಸ್ಯಹಾರದ ವಿಶೇಷ ಖಾದ್ಯಗಳನ್ನು ಪರಸ್ಪರ ಹಂಚಿ ತಿನ್ನಲಾಯಿತು. ಚರ್ಚ್‌ಗಳಲ್ಲಿ ಕ್ರಿಸ್ತನ ಕುರಿತ ಸಮೂಹಗಾನ, ನೃತ್ಯರೂಪಕಗಳು, ಪಿಯಾನೋ ನುಡಿಸುವುದು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.