ADVERTISEMENT

ರಾತ್ರಿ 10ರ ನಂತರ ಪಟಾಕಿ ಬೇಡ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಬೆಂಗಳೂರು:  ದೀಪಾವಳಿ ಹಬ್ಬದ ಆಚರಣೆ ವೇಳೆ ರಾತ್ರಿ ಹತ್ತು ಗಂಟೆಯ ನಂತರ ಪಟಾಕಿ ಸಿಡಿಸದಂತೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಸಾರ್ವಜನಿಕರಲ್ಲಿ ಮನವಿ    ಮಾಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟಾಕಿ ಶಬ್ದದಿಂದ ರೋಗಿಗಳಿಗೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಪಟಾಕಿ ಸಿಡಿಸುವಾಗ ಚಿಕ್ಕ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.

ಪಟಾಕಿಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಮತ್ತೊಂದೆಡೆ ಜನರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳನ್ನು ಸಾಧ್ಯವಾದಷ್ಟು ಬಳಸಬಾರದು ಎಂದು ಮನವಿ ಮಾಡಿದ ಅವರು ನಗರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಇದೇ ವೇಳೆ ಮಿರ್ಜಿ ಅವರು ಇಲಾಖೆಯ ಇತರೆ ಅಧಿಕಾರಿಗಳೊಂದಿಗೆ ಕಚೇರಿ ಆವರಣದಲ್ಲಿ ಹೂ ಕುಂಡ ಹಚ್ಚಿ ಸಾಂಕೇತಿಕವಾಗಿ ದೀಪಾವಳಿ ಹಬ್ಬ ಆಚರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.