ADVERTISEMENT

ರೇಷ್ಮೆ ಆಮದು ತಡೆಗೆ ಕೇಂದ್ರಕ್ಕೆ ನಿಯೋಗ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ಬೆಂಗಳೂರು: ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ 30ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಶೀಘ್ರವೇ ಸರ್ವ ಪಕ್ಷಗಳ ನಿಯೋಗವನ್ನು ನವದೆಹಲಿಗೆ ಕೊಂಡೊಯ್ಯಲಾಗುವುದು ಎಂದು ರೇಷ್ಮೆ ಸಚಿವ ಬಿ.ಎನ್. ಬಚ್ಚೇಗೌಡ ಶುಕ್ರವಾರ ಇಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಕಳೆದ ಫೆಬ್ರುವರಿಯಲ್ಲಿ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ 30ರಿಂದ ಶೇ 5ಕ್ಕೆ ಇಳಿಸಿದ ಪರಿಣಾಮ ರಾಜ್ಯದ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರ ಹಿತದೃಷ್ಟಿಯಿಂದ ಮೊದಲಿನ ಹಾಗೆ ಶೇ 30ರಷ್ಟು ಸುಂಕ ವಿಧಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರೈತರ ಮತ್ತು ನೂಲು ಬಿಚ್ಚಾಣಿಕೆದಾರರ ಹಿತ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ ಸರ್ಕಾರ ಇದುವರೆಗೆ ರೂ 17 ಕೋಟಿ ನೀಡಿದೆ. ಇನ್ನೂ 10 ಕೋಟಿ ರೂಪಾಯಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದರು.

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ರೇಷ್ಮೆ ಗೂಡಿನ ದರ ರೂ 180-190  ಇದೆ. ರೈತರು ಆತಂಕಪಡುವ ಅಗತ್ಯವಿಲ್ಲ. 15 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಮಂಡಳಿಯು ರೇಷ್ಮೆ ನೂಲು ಖರೀದಿ ಮಾಡುತ್ತಿರುವುದರಿಂದ ರೇಷ್ಮೆಗೂಡಿನ ದರ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೇಷ್ಮೆಗೂಡಿನ ಉತ್ಪಾದನೆ ಹೆಚ್ಚಾಗಿದೆ. ಮೇ ಅಂತ್ಯದವರೆಗೆ 9,104 ಟನ್ ಗೂಡಿನ ಉತ್ಪಾದನೆಯಾಗಿದೆ ಎಂದು ತಿಳಿಸಿದರು.

ಚೀನಾದಿಂದ 7.5 ಸಾವಿರ ಟನ್ ರೇಷ್ಮೆ ಆಮದು ಆಗುತ್ತಿದೆ, ಇದಲ್ಲದೆ ನೇಪಾಳ ಸೇರಿದಂತೆ ವಿವಿಧೆಡೆಯಿಂದ ಕಳ್ಳಸಾಗಾಣಿಕೆ ಮೂಲಕ ಮೂರು ಸಾವಿರ ಟನ್ ಬರುತ್ತಿದೆ. ಇದನ್ನು ತಡೆದರೆ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.