ADVERTISEMENT

ರೋಟರಿ: ಕಿಮೋಥೆರಪಿ ಚಿಕಿತ್ಸಾ ಘಟಕ ಆರಂಭ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಬೆಂಗಳೂರು: ರೋಟರಿ ಬೆಂಗಳೂರು ನೈರುತ್ಯ ಘಟಕವು ಬಡ ಮಕ್ಕಳಲ್ಲಿನ ಕ್ಯಾನ್ಸರ್ ಚಿಕಿತ್ಸೆಗೆ ನಗರ ಶಂಕಪುರದಲ್ಲಿರುವ ರಂಗದೊರೆ ಸ್ಮಾರಕ ಆಸ್ಪತ್ರೆಯ ಒಂದು ಭಾಗದಲ್ಲಿ  ಕಿಮೋಥೆರಪಿ ಚಿಕಿತ್ಸಾ ಘಟಕವನ್ನು ಆರಂಭಿಸಿದೆ.

ನೂತನ ಘಟಕವನ್ನು ಶುಕ್ರವಾರ ಉದ್ಘಾಟಿಸಿದ ಅಮೆರಿಕ ಅಲಬಾಮದ ರೋಟರಿ ಇಂಟರ್ ನ್ಯಾಷನಲ್ ಘಟಕದ ಮಾಜಿ ನಿರ್ದೇಶಕ ಮಾರ್ಕ್ ಮಲೋನಿ, `ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲೂ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲೇ ಇದನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡಿದರೆ ಗುಣಪಡಿಸಬಹುದಾಗಿದೆ.

ಹಾಗಾಗಿ ಬಡ ಮಕ್ಕಳಿಗೂ ಚಿಕಿತ್ಸೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದು ಹೇಳಿದರು.

ರೋಟರಿ ಬೆಂಗಳೂರು ಇಂಟರ್ ನ್ಯಾಷನಲ್‌ನ ಜಿಲ್ಲಾ ಗವರ್ನರ್ ಎಸ್. ನಾಗೇಂದ್ರ, `ಬಡ ಮಕ್ಕಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡುವ ವಿಭಾಗ ತೆರೆಯಲು ಕಳೆದ ವರ್ಷ 23 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿತ್ತು.

ಈ ವರ್ಷ 35 ಲಕ್ಷ ರೂಪಾಯಿ ವೆಚ್ಚ ಮಾಡಿ 12 ಹಾಸಿಗೆಯ ಘಟಕ ಆರಂಭಿಸಲಾಗಿದೆ. ಮುಂದೆ ಸುಮಾರು 60 ಲಕ್ಷ ರೂಪಾಯಿ ವೆಚ್ಚ ಮಾಡುವ ಉದ್ದೇಶವಿದ್ದು, ಬಡ ಮಕ್ಕಳಿಗೆ ಉಚಿತವಾಗಿ ಕಿಮೋಥೆರಪಿ ಚಿಕಿತ್ಸೆ ನೀಡಲಾಗುವುದು~ ಎಂದರು.

ರೋಟರಿ ಬೆಂಗಳೂರು ಪೀಣ್ಯ ಘಟಕದ ಅಧ್ಯಕ್ಷ ಶ್ರೀನಿವಾಸಮೂರ್ತಿ ಇತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.