ಬೆಂಗಳೂರು:`ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರೂ, ಲಯ ಮತ್ತು ತಾಳಕ್ಕೆ ಮನಸೋತು ಸಂಗೀತ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡೆ~ ಎಂದು ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಮನೆಯಂಗಳದಲ್ಲಿ ಮಾತುಕತೆ~ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಸಂಗೀತ ಮತ್ತು ಸಾಹಿತ್ಯದ ಮೂಲಕ ಆತ್ಮ ಸಂತೋಷ ಪಡೆಯುತ್ತಿದ್ದು, ಇವೆರೆಡನ್ನು ಒಟ್ಟಿಗೆ ಜನರಿಗೆ ತಲುಪಿಸುವಲ್ಲಿ ನಿರತನಾಗಿದ್ದೇನೆ. ಭಾರತದ ಶಾಸ್ತ್ರೀಯ ಸಂಗೀತದ ನೆಲೆಗಟ್ಟು ಸದೃಢವಾಗಿರುವವರೆಗೂ ಸಂಗೀತದ ಪ್ರಕಾರಗಳು ಜನರಿಗೆ ಇಷ್ಟವಾಗುತ್ತದೆ~ ಎಂದು ಹೇಳಿದರು.
`ರಾಗ, ಸ್ವರ ಮತ್ತು ಲಯಗಳ ಬಗ್ಗೆ ಪುರಂದರದಾಸರು ನೀಡಿರುವ ಕೊಡುಗೆಯ ಬಗ್ಗೆ ಅರಿಯದೇ ಕೆಲವರು ಭಾರತೀಯ ಸಂಗೀತದ ಪಿತಾಮಹ ಪುರಂದರದಾಸರು ಎಂಬುದನ್ನು ಒಪ್ಪಲು ಸಿದ್ದರಿಲ್ಲ. ಪುರಂದರದಾಸರು ದಾಸ ಸಾಹಿತ್ಯದ ಮೂಲಕ ಭಾರತೀಯ ಸಂಗೀತ ಭದ್ರ ಬುನಾದಿ ಹಾಕಿದ್ದಾರೆ. ಇದರಿಂದ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಭಾರತೀಯ ಸಂಗೀತ ನಶಿಸದು~ ಎಂದರು.
`ಭಾರತೀಯ ಸಂಗೀತ ಪ್ರಕಾರಗಳಲ್ಲಿರುವ ಲಯ, ರಾಗ ಮತ್ತು ಸ್ವರಗಳು ವಿಶ್ವದ ಯಾವುದೇ ಸಂಗೀತ ಪ್ರಕಾರಗಳಲ್ಲಿ ನೋಡಲು ಸಾಧ್ಯವಿಲ್ಲ. ಆದ್ದರಿಂದ ಯುವಕರು ಮತ್ತು ಮಕ್ಕಳಲ್ಲಿ ಸಂಗೀತ ಕಲಿಯಬೇಕೆನ್ನುವ ತುಡಿತ ಹೆಚ್ಚಾಗುತ್ತಿದೆ. ಸಂಗೀತಗಾರರು ಸಾಹಿತ್ಯದ ಪರಿಚಾರಕಾಗಿ ಕಾರ್ಯನಿರ್ವಹಿಸಬೇಕು~ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.