ADVERTISEMENT

ಲಾಕಪ್‌ ಡೆತ್‌?

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:10 IST
Last Updated 23 ಏಪ್ರಿಲ್ 2018, 19:10 IST

ಬೆಂಗಳೂರು: ರೌಡಿಶೀಟರ್‌ ಒಬ್ಬ ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರನ್ನು ನೋಡಿ, ತಪ್ಪಿಸಿಕೊಂಡು ಓಡುವ ಭರದಲ್ಲಿ ಆಯತಪ್ಪಿ ಬಿದ್ದು, ಮೃತಪಟ್ಟ ಪ್ರಕರಣ ಡಿ.ಜೆ ಹಳ್ಳಿಯಲ್ಲಿ ಸೋಮವಾರ ನಡೆದಿದೆ. ಆದರೆ, ಇದು ‘ಲಾಕಪ್‌ ಡೆತ್‌‘ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ.

ಡಿ.ಜೆ ಹಳ್ಳಿ ನಿವಾಸಿ, ಪಿ.ಪಿ ಕಲೀಂ ಅಲಿಯಾಸ್‌ ಪಿಕ್‌ಪಾಕೆಟ್‌ ಕಲೀಂ ಮೃತಪಟ್ಟ ರೌಡಿ ಶೀಟರ್‌. ಈತ ರೌಡಿ ಅನೀಸ್‌ ಸಹಚರನಾಗಿದ್ದು, ಕೊಲೆ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

‘ಕಲೀಂನನ್ನು ಬಂಧಿಸಿ ಕಸ್ಟಡಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪೊಲೀಸರು ಥಳಿಸಿದ್ದರಿಂದ, ಅಸ್ವಸ್ಥಗೊಂಡು ಆತ ಮೃತಪಟ್ಟಿದ್ದಾನೆ. ಇದು ನಡೆದಿರುವ ನೈಜ ಘಟನೆ. ಆದರೆ, ಆತ ತಪ್ಪಿಸಿಕೊಂಡು ಓಡುವಾಗ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು, ಬೇರೆಯೇ ಕಥೆ ಹೆಣೆದಿದ್ದಾರೆ’ ಎಂದು ಕಲೀಂ ಸಂಬಂಧಿ ದೂರಿದ್ದಾರೆ.

ADVERTISEMENT

‘ಡಿ.ಜೆ. ಹಳ್ಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಮಧ್ಯಾಹ್ನ 3.30ರ ಸುಮಾರಿಗೆ ಈತನನ್ನು ನೋಡಿದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ತಕ್ಷಣವೇ ಕಾರ್ಯಾಚರಣೆಗೆ ಇಳಿದ ಪೊಲೀಸರನ್ನು ನೋಡಿದ ಕಲೀಂ, ಓಡಿ ಹೋಗಿ ಆವರಣ ಗೋಡೆಯೊಂದನ್ನು ಹಾರಲು ಮುಂದಾದಾಗ ಆಯತಪ್ಪಿ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಎದೆಗೆ ತೀವ್ರ ಪೆಟ್ಟುಬಿದ್ದ ಕಾರಣ ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.