ADVERTISEMENT

ಲಿಂಗರಾಜು ಹತ್ಯೆ ಪ್ರಕರಣ: ಗೌರಮ್ಮ ಬಂಧನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 8:12 IST
Last Updated 13 ಡಿಸೆಂಬರ್ 2012, 8:12 IST

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ಲಿಂಗರಾಜು (50) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸರು ಬಿಬಿಎಂಪಿ ಆಜಾದ್‌ನಗರ ವಾರ್ಡ್ ಸದಸ್ಯೆ, ಕಾಂಗ್ರೆಸ್‌ನ ಗೌರಮ್ಮ (45) ಅವರನ್ನು ತಮಿಳುನಾಡಿನಲ್ಲಿ ಬುಧವಾರ ಬಂಧಿಸಿದ್ದಾರೆ. ಈ ಮಧ್ಯೆ, ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. ತನಿಖೆ ಕುರಿತು ಫೆಬ್ರುವರಿ 10ರಂದು ವರದಿ ನೀಡಬೇಕು ಎಂದೂ ನಿರ್ದೇಶನ ನೀಡಿದೆ.

`ಹತ್ಯೆ ಪ್ರಕರಣ ಸಂಬಂಧ ಗೌರಮ್ಮ ಅವರ ಪತಿ ಸಿ.ಗೋವಿಂದರಾಜು (50) ಸೇರಿದಂತೆ ಎಂಟು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರು ವಿಚಾರಣೆ ವೇಳೆ ನೀಡಿದ ಮಾಹಿತಿ ಮತ್ತು ಗೌರಮ್ಮನ ಮೊಬೈಲ್ ಕರೆಗಳಿಂದಾಗಿ, ಅವರೂ ಸಹ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಗೌರಮ್ಮ, ಲಿಂಗರಾಜು ಅವರ ಕೊಲೆಯ ಸಂಚಿನಲ್ಲಿ ನೇರವಾಗಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ, ಇದಕ್ಕೆ ಪೂರಕ ಸಾಕ್ಷ್ಯಗಳು ಸಹ ಲಭ್ಯವಾಗಿವೆ. ಅವರ ಮನೆಯ ಮೇಲೆ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ದಾಳಿಯ ಹಿಂದೆ ಲಿಂಗರಾಜುವಿನ ಕೈವಾಡವಿದೆ ಎಂದು ಕೋಪಗೊಂಡಿದ್ದ ಗೋವಿಂದರಾಜು, ಇತರೆ ಆರೋಪಿಗಳಿಗೆ 15 ಲಕ್ಷ ರೂಪಾಯಿ ಸುಪಾರಿ ಕೊಟ್ಟು ನ. 20ರಂದು ಅವರನ್ನು ಕೊಲೆ ಮಾಡಿಸಿದ್ದ. ಸುಪಾರಿಗೆ ಹಣ ಹೊಂದಿಸಲು ಗೌರಮ್ಮ, ತಮ್ಮ ಆಭರಣಗಳನ್ನು ಅವಲಹಳ್ಳಿಯ ಬ್ಯಾಂಕ್‌ವೊಂದರಲ್ಲಿ ಅಡವಿಟ್ಟು 19 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಆ ಹಣದಲ್ಲಿ ಐದು ಲಕ್ಷ ರೂಪಾಯಿಯನ್ನು ಮುಂಗಡವಾಗಿ ಆರೋಪಿಗಳಿಗೆ ಕೊಟ್ಟಿದ್ದರು ಎಂದು ಗೊತ್ತಾಗಿದೆ' ಎಂದು ಅವರು ಹೇಳಿದ್ದಾರೆ.

`ಪೊಲೀಸರು ಬಂಧಿಸಬಹುದೆಂಬ ಭಯದಿಂದ ಗೌರಮ್ಮ, ಮಗಳ ಮದುವೆಯ ನಂತರ ತಲೆಮರೆಸಿಕೊಂಡಿದ್ದರು. ಮದುರೆ, ತಂಜಾವೂರು ಹಾಗೂ ಆಂಧ್ರಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಆದರೆ, ಅವರ ಮೊಬೈಲ್ ಕರೆಗಳ ಜಾಡು ಹಿಡಿದು ತಂಜಾವೂರಿನ ಹೋಟೆಲ್‌ನಲ್ಲಿ ಉಳಿದುಕೊಂಡಿರುವುದನ್ನು ಪತ್ತೆ ಮಾಡಿದ ಸಿಬ್ಬಂದಿ, ಬುಧವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ಹೈಕೋರ್ಟ್ ಆದೇಶ: ಲಿಂಗರಾಜು ಹತ್ಯೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಗಮನಿಸಿ, ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.`ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲು ಅಭ್ಯಂತರವಿಲ್ಲ. ಜಂಟಿ ಪೊಲೀಸ್ ಆಯುಕ್ತ ಪ್ರಣವ್ ಮೊಹಾಂತಿ ಹಾಗೂ ಸಿಐಡಿ ಅಧಿಕಾರಿ ಅಬ್ದುಲ್ ಅಹದ್ ಅವರನ್ನು ಒಳಗೊಂಡ ಎಸ್‌ಐಟಿ ರಚಿಸಲಾಗುವುದು' ಎಂದು ಸರ್ಕಾರ ಬುಧವಾರ ವಿಭಾಗೀಯ ಪೀಠಕ್ಕೆ ತಿಳಿಸಿತು.

ಇದಕ್ಕೆ ನ್ಯಾಯಮೂರ್ತಿಗಳು ಒಪ್ಪಿಗೆ ಸೂಚಿಸಿದರು. `ಅಗತ್ಯ ಕಂಡುಬಂದರೆ ಮೊಹಂತಿ ಮತ್ತು ಅಹದ್ ಅವರು ಎಸ್‌ಐಟಿಗೆ ಹೆಚ್ಚಿನ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯೆ ಗೌರಮ್ಮ ಅವರ ಪತಿ ಸಿ.ಗೋವಿಂದರಾಜು ಬಂಧನದ ದಿನದಿಂದ ಪೂರ್ವಾನ್ವಯ ಆಗುವಂತೆ, 90 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು' ಎಂದು ನಿರ್ದೇಶನ ನೀಡಿದರು. ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಹಿರಿಯ ವಕೀಲ ಸದಾಶಿವಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಪ್ರಕರಣದ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

`ರಾಜ್ಯದಲ್ಲಿ ಆರ್‌ಟಿಐ ಕಾರ್ಯಕರ್ತರಿಗೆ ಯಾವುದೇ ಭದ್ರತೆ ಇಲ್ಲ. ಹರಿಯಾಣದಲ್ಲಿ ಆರ್‌ಟಿಐ ಕಾರ್ಯಕರ್ತರಿಗೆ ಭದ್ರತೆ ನೀಡುವ ಉದ್ದೇಶದಿಂದ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ' ಎಂದು ಪಾಷಾ ನ್ಯಾಯಾಲಯದ ಗಮನ ಸೆಳೆದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ರಾಜ್ಯದಲ್ಲೂ ನಿಯಮ ರೂಪಿಸುವಂತೆ ಸೂಚನೆ ನೀಡಿತು.

ಪಾಷಾಗೆ ಪ್ರಶಂಸೆ: ಪ್ರಕರಣದ ಅಮಿಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ) ಆಗಿ ನೇಮಕವಾಗಿದ್ದ ವಕೀಲ ಅಸ್ಮತ್ ಪಾಷಾ ಅವರು ನಿರ್ವಹಿಸಿದ ಪಾತ್ರವನ್ನು ಪ್ರಶಂಸಿಸಿದ ನ್ಯಾಯಪೀಠ, ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಅವರಿಗೆ 40 ಸಾವಿರ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು. ಆದರೆ, ತಮಗೆ ಹಣ ಬೇಡ ಎಂದು ಹೇಳಿದ ಪಾಷಾ, ಆ ಮೊತ್ತವನ್ನು ಲಿಂಗರಾಜು ಅವರ ಕುಟುಂಬಕ್ಕೆ ನೀಡಬೇಕು ಎಂದು ಕೋರಿದರು. `ಆ ಮೊತ್ತವನ್ನು ಸರ್ಕಾರದಿಂದ ನೀವೇ ಪಡೆದು, ಲಿಂಗರಾಜು ಕುಟುಂಬಕ್ಕೆ ಕೊಡಿ' ಎಂದು ನ್ಯಾಯಪೀಠ ಸಲಹೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT