ADVERTISEMENT

ಲೈಂಗಿಕ ದೌರ್ಜನ್ಯ ವಿರುದ್ಧ ಜಾಗೃತಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:02 IST
Last Updated 19 ಮೇ 2018, 19:02 IST
ದೀಪಕ್ ತಿಮ್ಮಯ್ಯ ಮಾತನಾಡಿದರು. ಮಹರ್ಷಿ ಸಂಕೇತ್‌ ಮತ್ತು ಸಮೀರಾ ಫರ್ನಾಂಡಿಸ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ದೀಪಕ್ ತಿಮ್ಮಯ್ಯ ಮಾತನಾಡಿದರು. ಮಹರ್ಷಿ ಸಂಕೇತ್‌ ಮತ್ತು ಸಮೀರಾ ಫರ್ನಾಂಡಿಸ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಿರುವ 15 ವರ್ಷದ ಬಾಲಕ ಮಹರ್ಷಿ ಸಂಕೇತ್‌, ಬೆಂಗಳೂರಿನಿಂದ ಮುಂಬೈಗೆ ಸೈಕಲ್‌ ಜಾಥಾ ನಡೆಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾನೆ.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸ್ಪೀಕ್‌ ಔಟ್‌’ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಸಂಕೇತ್‌, ‘ದೌರ್ಜನ್ಯ, ದ್ವೇಷ ಮತ್ತು ಅಪರಾಧ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಅವುಗಳನ್ನು ಮಾಧ್ಯಮಗಳಲ್ಲಿ ನೋಡಿ, ದೌರ್ಜನ್ಯಕ್ಕೆ ಒಳಗಾದವರ ಮಾತುಗಳನ್ನು ಕೇಳಿದ ಬಳಿಕ ಈ ಬಗ್ಗೆ ದನಿ ಎತ್ತಬೇಕು ಎಂಬ ತುಡಿತ ಹೆಚ್ಚಾಯಿತು’ ಎಂದು ಆಲೋಚನೆ ಮೂಡಿದ ಬಗೆಯನ್ನು ತಿಳಿಸಿದನು.

‘ಸೈಕಲ್‌ನಲ್ಲಿ ಒಬ್ಬನೇ 1,000 ಕಿ.ಮೀ ಪ್ರಯಾಣಿಸುವುದು ಸುಲಭದ ಸಂಗತಿಯಲ್ಲ. ನನ್ನ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೂ ಇದು ಸವಾಲಾಗಿತ್ತು. ಸೈಕಲ್‌ನಲ್ಲಿ ಪ್ರಯಾಣ ಮಾಡಿದ್ದರಿಂದ ತಳಮಟ್ಟದ ಸಮಸ್ಯೆಗಳನ್ನು ಅರಿಯಲು, ಹಾದಿಯುದ್ದಕ್ಕೂ ಜನರೊಂದಿಗೆ ಮಾತನಾಡಲು, ಅವರ ನೋವುಗಳನ್ನು ಆಲಿಸಲು ಸಾಧ್ಯವಾಯಿತು’ ಎಂದು ವಿವರಿಸಿದನು.

ADVERTISEMENT

‘ಸಂಗೀತಗಾರರಾದ ಕ್ರಿಸ್‌ ಅವಿನಾಶ್‌, ಅಂಕಿತಾ ಕುಂಡು ಹಾಗೂ ಸಾಧು ನಿತ್ಯಾನಂದ ‌ತಂಡದ ಜೊತೆಗೂಡಿ ಅಭಿಯಾನಕ್ಕೊಂದು ಗೀತೆಯನ್ನೂ ರೂಪಿಸಲಾಗಿತ್ತು. ಈ ವಿಷಯವನ್ನೇ ಆಧರಿಸಿ ಕಿರುಚಿತ್ರ ನಿರ್ಮಿಸಲಾಗುತ್ತಿದೆ. ಚಿತ್ರಕಲೆಗಳ ಮೂಲಕವೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.

‘ಮೇ 21ರಂದು ಕಬ್ಬನ್‌ ಉದ್ಯಾನದಿಂದ ಪ್ರಾರಂಭವಾದ ನನ್ನ ಸೈಕಲ್‌ ಪಯಣ, ತುಮಕೂರು, ಶಿರಾ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಕೊಲ್ಲಾಪುರ, ಸತಾರ, ಪುಣೆ, ಲೊನಾವಲಾ ಮಾರ್ಗವಾಗಿ ಮುಂಬೈ ತಲುಪಿತು. ಪ್ರತಿ ದಿನ 70 ರಿಂದ 100 ಕಿ.ಮೀ ಕ್ರಮಿ
ಸುತ್ತಿದ್ದೆ. 11 ದಿನಗಳಲ್ಲಿ ಪ್ರಯಾಣ ಮುಗಿಯಿತು. ಈ ಅಭಿಯಾನಕ್ಕಾಗಿ ಜನರಿಂದಲೂ ಹಣ ಸಂಗ್ರಹಿಸಲಾಗಿತ್ತು’ ಎಂದು ಹೇಳಿದನು.

ಸಿನಿಮಾ ನಿರ್ದೇಶಕ ಸುಖಾಂತ್‌ ಪಾಣಿಗ್ರಾಹಿ, ಹೋರಾಟಗಾರ್ತಿ ರೂಪಾಮೌಳಿ ಮೈಸೂರು, ಲೇಖಕಿ ಸಂಧ್ಯಾ ಮೆಂಡೋನ್ಕಾ, ದೀಪಕ್‌ ತಿಮ್ಮಯ್ಯ, ಕಲಾವಿದರಾದ ಶಾನ್‌ ರೇ, ಎಂ.ಜಿ ದೊಡ್ಡಮನಿ, ಶೋಮಿ ಬ್ಯಾನರ್ಜಿ ಅವರೊಂದಿಗೆ ಸಂವಾದ ನಡೆ
ಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.