ADVERTISEMENT

‘ವರದಿ ಪರಾಮರ್ಶಿಸಿ ಶಿಫಾರಸು’

ಲಿಂಗಾಯತಕ್ಕೆ ಪ್ರತ್ಯೇಕ ‌ಧರ್ಮ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:46 IST
Last Updated 3 ಮಾರ್ಚ್ 2018, 19:46 IST
ಶಾಮನೂರು ಶಿವಶಂಕರಪ್ಪ ಚಿತ್ರ: ಎಂ.ಎಸ್‌. ಮಂಜುನಾಥ್‌
ಶಾಮನೂರು ಶಿವಶಂಕರಪ್ಪ ಚಿತ್ರ: ಎಂ.ಎಸ್‌. ಮಂಜುನಾಥ್‌   

ಹುಬ್ಬಳ್ಳಿ: ‘ಲಿಂಗಾಯತಕ್ಕೆ ಪ್ರತ್ಯೇಕ ‌ಧರ್ಮ ಮಾನ್ಯತೆ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನೇಮಕ ಮಾಡಿದ ಸಮಿತಿಯು ಇನ್ನೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ವರದಿ ಬಂದ ಕೂಡಲೇ ಅದರ ಪರಾಮರ್ಶೆ ನಡೆಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಹಲವು ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಹೀಗಾಗಿ ಆಯೋಗವು ಸಮಿತಿ ರಚಿಸಿತ್ತು. ಸಂಘಟನೆಗಳು ನಿರಂತರ ಒತ್ತಡ ಹೇರುತ್ತಿದ್ದುದರಿಂದ ಆದಷ್ಟು ಶೀಘ್ರವೇ ವರದಿ ಕೊಡಬೇಕು ಎಂದು ಹೇಳಿದ್ದೇವೆಯೇ ಹೊರತು ಇನ್ನಾವ ಒತ್ತಡವನ್ನೂ ಹೇರಿರಲಿಲ್ಲ’ ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದರು.

‘ಇದೆಲ್ಲಾ ಮೊದಲೇ ಗೊತ್ತಿತ್ತು’

ADVERTISEMENT

ದಾವಣಗೆರೆ: ‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಯಾವಾಗ ಸಮಿತಿ ನೇಮಿಸಿದರೊ, ಆಗಲೇ ಅವರೆಲ್ಲಾ ಕಮಿಟೆಡ್‌ ಅಂತಾ ಗೊತ್ತಾಯಿತು. ಅವರೆಲ್ಲಾ ಕಾಪಿ ಹೊಡೆಯುವ ಮೇಷ್ಟ್ರು ಇದ್ದಂಗೆ. ಅದೆಲ್ಲ ಗೊತ್ತಿರುವ ವಿಚಾರ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಸಮಿತಿಯ ವಿರುದ್ಧ ಕಿಡಿಕಾರಿದರು.

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರವಾಗಿ ತಜ್ಞರ ಸಮಿತಿಯಿಂದ ಅಲ್ಪಸಂಖ್ಯಾತ ಆಯೋಗಕ್ಕೆ ವರದಿ ಸಲ್ಲಿಸಿರುವ ಕುರಿತು ಅವರು ಶನಿವಾರ ‌ಮಾತನಾಡಿದರು.  ‘ಸಮಿತಿ ಹಾಗೂ ಸರ್ಕಾರ ಇಂಥದ್ದೇ ಶಿಫಾರಸು ಮಾಡುತ್ತದೆ ಎನ್ನುವುದು ನಮಗೆ ಮುಂಚೆಯೇ ಗೊತ್ತಿತ್ತು. ಆದರೆ, ಅದು ಮುಂದೆ ಏನೂ ಆಗುವುದಿಲ್ಲ. ನಾವು– ವೀರಶೈವ ಲಿಂಗಾಯತರು ಕೊನೆಯವರೆಗೂ ತಟಸ್ಥವಾಗಿರುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

**

ಒಂದು ಐತಿಹಾಸಿಕ ಸತ್ಯವನ್ನು ಪ್ರಾಮಾಣಿಕವಾಗಿ ಘೋಷಿಸಿದ್ದಕ್ಕಾಗಿ ಸಮಿತಿಗೆ ಧನ್ಯವಾದ. ರಾಜ್ಯ ಸರ್ಕಾರವು ಆದಷ್ಟು ಬೇಗ ಕೇಂದ್ರಕ್ಕೆ ಶಿಫಾರಸು ಮಾಡಬೇಕು.

-ಮಾತೆ ಮಹಾದೇವಿ, ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ

**

ಲಿಂಗಾಯತರಿಗೆ ಕೇವಲ ‘ಅಲ್ಪಸಂಖ್ಯಾತರು’ ಎಂಬ ಹಣೆಪಟ್ಟಿ ಕಟ್ಟುವುದಕ್ಕಾಗಿ, ಕಾಂಗ್ರೆಸ್‌ ಮುಖಂಡರು ಇಷ್ಟೆಲ್ಲ ಹೋರಾಟ, ಕಸರತ್ತು ಮಾಡಬೇಕಿತ್ತೇ?

-ಜಗದೀಶ ಶೆಟ್ಟರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.