ADVERTISEMENT

ವರುಣನ ಅಬ್ಬರ, ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:55 IST
Last Updated 1 ಸೆಪ್ಟೆಂಬರ್ 2013, 19:55 IST

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ವರುಣನ ಅಬ್ಬರ ಜೋರಾಗಿತ್ತು. ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಗುಡುಗು ಮಿಂಚು ಸಹಿತ ಸುರಿದ ಮಳೆಯಿಂದಾಗಿ ತಗ್ಗುಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತ ವಾಯಿತು.

ರಾಮಮೂರ್ತಿನಗರ ಸಮೀಪದ ಆರ್.ಆರ್.ಲೇಔಟ್ ನಾಲ್ಕನೇ ಅಡ್ಡರಸ್ತೆ, ಪೈ ಲೇಔಟ್, ಎನ್‌ಜಿಇಎಫ್ ಲೇಔಟ್‌ನ ಎರಡನೇ ಅಡ್ಡರಸ್ತೆ, ಪೀಣ್ಯ ದಾಸರಹಳ್ಳಿ ಮುಖ್ಯರಸ್ತೆಯ ತರಕಾರಿ ಮಾರುಕಟ್ಟೆ ಬಳಿ ಹಲವು ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿತು. ಕಲಾಸಿಪಾಳ್ಯ ಪೊಲೀಸ್ ಠಾಣೆ ಎದುರು ಹಾಗೂ ಕಬ್ಬನ್‌ಪಾರ್ಕ್‌ನ ಒಳ ಭಾಗದಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು.

ಮೆಜೆಸ್ಟಿಕ್ ಬಳಿಯ ಖೋಡೆ ವೃತ್ತ, ಧನ್ವಂತರಿ ರಸ್ತೆ, ಆರ್.ವಿ.ರಸ್ತೆ, ಕುಮಾರಕೃಪಾ ಪೂರ್ವ ಬಡಾವಣೆ ಸಮೀಪದ ಅಮೆರಿಕನ್ ಕಾಲೊನಿಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು. ಕಿನೊ ಚಿತ್ರಮಂದಿರದ ಬಳಿ ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ನೀರಿನಲ್ಲಿ ಮುಳುಗಿದವು. ಅರಮನೆ ರಸ್ತೆಯ ಸಿಐಡಿ ಕೇಂದ್ರ ಕಚೇರಿ ಬಳಿ ಹಲವು ವಾಹನಗಳು ನೀರಿನಲ್ಲಿ ಮುಳುಗಿ ಸವಾರರು ಪರದಾಡಿದರು. ಮೆಜೆಸ್ಟಿಕ್, ಕೆಂಪೇಗೌಡ ರಸ್ತೆ, ಶೇಷಾದ್ರಿ ರಸ್ತೆ, ಸಿಟಿ ಮಾರುಕಟ್ಟೆ, ಮೈಸೂರು ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಆಟೊ ಚಾಲಕರು ಹಾಗೂ ಬೈಕ್ ಸವಾರರು ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

`ಮೆಟ್ರೊ ಕಾಮಗಾರಿಯಿಂದಾಗಿ ಮೋರಿ ಕಟ್ಟಿಕೊಂಡು ಕಾಲೊನಿಯ 40ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ತಡರಾತ್ರಿಯಾದರೂ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಆದ್ದರಿಂದ ನಾವೇ ನೀರನ್ನು ಹೊರಗೆ ಚೆಲ್ಲುತ್ತಿದ್ದೇವೆ' ಎಂದು ಪೀಣ್ಯ ದಾಸರಹಳ್ಳಿ ನಿವಾಸಿ ನಿರ್ಮಲಾ `ಪ್ರಜಾವಾಣಿ'ಗೆ ತಿಳಿಸಿದರು.

`ಮನೆಯಲ್ಲಿ ಮಾಡಿಟ್ಟಿದ್ದ ಆಹಾರ ಪದಾರ್ಥಗಳೆಲ್ಲಾ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಚರಂಡಿ ನೀರು ಮನೆಗೆ ನುಗ್ಗಿರುವುದರಿಂದ ಕುಟುಂಬ ಸದಸ್ಯರೆಲ್ಲಾ ಮನೆಯಿಂದ ಹೊರಗೆ ಬಂದು ನಿಂತಿದ್ದೇವೆ. ಪಾಲಿಕೆ ಅಧಿಕಾರಿಗಳು ದೂರಿಗೆ ಸ್ಪಂದಿಸುತ್ತಿಲ್ಲ' ಎಂದು ಎನ್‌ಜಿಇಎಫ್ ಲೇಔಟ್ ನಿವಾಸಿ ಸೌಮ್ಯ ಅಳಲು ತೋಡಿಕೊಂಡರು.

`ನಗರದ ಒಳ ಭಾಗದಲ್ಲಿ 79 ಮಿ.ಮೀ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ 22 ಮಿ.ಮೀ ಮಳೆಯಾತಗಿದೆ' ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.