ADVERTISEMENT

ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಪ್ರಾಜೆಕ್‌ಗಳ ಮಾದರಿಯ ಕುರಿತು ಅಧ್ಯಾಪಕರು ಹಾಗೂ ಸಹವಿದ್ಯಾರ್ಥಿಗಳು ಮಾಹಿತಿ ಪಡೆದರು.
ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಪ್ರಾಜೆಕ್‌ಗಳ ಮಾದರಿಯ ಕುರಿತು ಅಧ್ಯಾಪಕರು ಹಾಗೂ ಸಹವಿದ್ಯಾರ್ಥಿಗಳು ಮಾಹಿತಿ ಪಡೆದರು.   

ಬೆಂಗಳೂರು: ಯಲಹಂಕದ ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಪ್ರಾಜೆಕ್ಟ್ ಎಕ್ಸ್‌ಪೊ’ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿತು.

ವಿಜ್ಞಾನ, ತಂತ್ರಜ್ಞಾನ, ಕೃಷಿ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಟ್ಟು 500 ಪ್ರಾಜೆಕ್ಟ್‌ಗಳನ್ನು‍ ಪ್ರದರ್ಶಿಸಲಾಯಿತು.

ಭಾರತೀಯ ಬಾಹ್ಯಾಕಾಶ ಸಂಸ್ಥೆ, ಎಚ್‌ಎಎಲ್‌, ಬಿಇಎಲ್‌, ಬಿಎಚ್‌ಇಎಲ್‌ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ADVERTISEMENT

ಎಕ್ಸ್‌ಪೊಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ನಿವೃತ್ತ ಮಹಾ ನಿರ್ದೇಶಕ ಡಾ.ಕೆ.ಡಿ.ನಾಯಕ್ ಚಾಲನೆ ನೀಡಿದರು.

ಭಾರತ ಕೃಷಿ ಪ್ರಧಾನ ರಾಷ್ಟ್ರ ಆಗಿರುವುದರ ಜತೆಗೆ, ತಂತ್ರಜ್ಞಾನದ ತವರುಮನೆಯಾಗಿದೆ. ಆಧುನಿಕ ತಂತ್ರಜ್ಞಾನವು ಕೃಷಿಯ ಪ್ರಗತಿಗೆ ಪೂರಕವಾಗಿರಬೇಕು. ಈ ಸಂಬಂಧ ವಿಶ್ವವಿದ್ಯಾಲಯಗಳು ಹೊಸ ಆವಿಷ್ಕಾರಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ರೇವಾ ವಿಶ್ವವಿದ್ಯಾಲಯದ ‌ಉಪಕುಲಪತಿ ಎಸ್.ವೈ.ಕುಲಕರ್ಣಿ, ‘ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸುತ್ತಾರೆ. ಈ ಹಿಂದೆ ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಈ ವರ್ಷ ಓಪನ್‌ ಪ್ರಾಜೆಕ್ಟ್‌ ಎಕ್ಸ್‌ಪೊ ಏರ್ಪಡಿಸಲಾಗಿದೆ. ಇದರಿಂದ ವಿವಿಧ ಕಂಪನಿಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿದೆ’ ಎಂದರು.

ಇಲ್ಲಿ ಪ್ರದರ್ಶಿಸಿರುವ ಆವಿಷ್ಕಾರಗಳಿಗೆ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆಯಬಹುದು. ಅಂತಹ ಯೋಜನೆಗಳಿಗೆ ವಿಶ್ವವಿದ್ಯಾಲಯದಿಂದ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಹೇಳಿದರು.

ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ‘ಎಕ್ಸ್‌ಪೊದಲ್ಲಿ 15 ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ವಂತ ಉದ್ಯಮ ಸ್ಥಾಪಿಸಲು ಪೂರಕ ವಾತಾವಣ ಕಲ್ಪಿಸುವುದು ಇದರ ಮುಖ್ಯ ಉದ್ದೇಶ’ ಎಂದರು.

‘ಸಾಫ್ಟ್‌ವೇರ್‌ ಆಧಾರಿತ ಆನ್‌ಲೈನ್‌ ಪಿ.ಜಿ. ಪ್ರಾಜೆಕ್ಟ್‌ ಸಿದ್ಧಪಡಿಸಿದ್ದೇನೆ. ವಿದ್ಯಾರ್ಥಿಗಳು ಇದರ ಸಹಾಯದಿಂದ ಕಾಲೇಜು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. ಇದರಿಂದ ಸಮಯ ಉಳಿತಾಯವಾಗುತ್ತದೆ. ವಿವಿಧ ಪ್ರಾಜೆಕ್ಟ್‌ಗಳ ಬಗ್ಗೆ ತಿಳಿದುಕೊಳ್ಳಲು ಎಕ್ಸ್‌ಪೊ ಸಹಕಾರಿ’ ಎಂದು ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸ್ವಾತಿ ತಿಳಿಸಿದರು.

ವಿದ್ಯಾರ್ಥಿ ಎಂ.ಅರವಿಂದ್, ‘ಬಹು ವಿಧದ ಕಾರ್ಯಗಳನ್ನು ಮಾಡುವ ಕೃಷಿ ಯಂತ್ರವನ್ನು ತಯಾರಿಸಿದ್ದೇನೆ. ಇದರಲ್ಲಿ ಏಕಕಾಲಕ್ಕೆ ರಸಾಯನಿಕ ಗೊಬ್ಬರ ಮತ್ತು ಔಷಧವನ್ನು ಸಿಂಪಡಿಸಬಹುದು. ಇದರಿಂದ ಮಾನವ ಶ್ರಮ ಉಳಿತಾಯದ ಜತೆಗೆ ವೆಚ್ಚವೂ ಕಡಿಮೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.