ADVERTISEMENT

`ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ'

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:41 IST
Last Updated 20 ಜುಲೈ 2013, 19:41 IST

ಬೆಂಗಳೂರು: `ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದ ಹೊರತು ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) 44ನೇ ಸಂಸ್ಥಾಪನಾ ದಿನದ ಅಂಗವಾಗಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆ ಮಾಡದಿದ್ದರೆ ಕೃಷಿ ಹಾಗೂ ಕೈಗಾರಿಕಾ ವಲಯಗಳ ಅಭಿವೃದ್ಧಿ ಸಾಧ್ಯವಿಲ್ಲ. ಇದರಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಗಲಿದೆ.  ಕಳೆದ 15 ವರ್ಷಗಳಿಂದ ಆಹಾರ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ರಾಜ್ಯದಲ್ಲಿರುವ 22 ಲಕ್ಷ ಪಂಪ್‌ಸೆಟ್‌ಗಳಿಗೆ ಅಗತ್ಯ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದರು.

`ಹಿಂದಿನ ಸರ್ಕಾರಗಳು ವಿದ್ಯುತ್ ಉತ್ಪಾದನೆಗೆ ಒತ್ತು ನೀಡದ ಕಾರಣ ನಿರೀಕ್ಷಿತ ಮಟ್ಟದ ಉತ್ಪಾದನೆಯಾಗಿಲ್ಲ. ಹೀಗಾಗ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಸಮರ್ಪಕ ವಿದ್ಯುತ್, ಭೂಮಿ, ನೀರಿನ ಸೌಲಭ್ಯವನ್ನು ಒದಗಿಸದಿದ್ದರೆ ಕೈಗಾರಿಕೆಗಳು ಬರಲು ಸಹ ಹಿಂದೇಟು ಹಾಕುತ್ತವೆ' ಎಂದರು.

`ಹೆಚ್ಚಿನ ಪ್ರಮಾಣ ವಿದ್ಯುತ್ ಉತ್ಪಾದನೆ, ವಿದ್ಯುತ್ ಸೋರಿಕೆ ತಡೆಯುವುದು, ಓವರ್‌ಲೋಡ್ ಆಗಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಸೆಲ್ವಕುಮಾರ್, ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್ ಪಾಂಡೆ, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಕಾಂಬಳೆ, ಗೃಹ ಮತ್ತು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಮತ್ತಿತರರು ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.