ADVERTISEMENT

‘ವಿದ್ವತ್‌ಗೆ ಏನೂ ಆಗೇ ಇಲ್ಲ, ನಲಪಾಡ್‌ ಹಲ್ಲೆ ನಡೆಸಿಲ್ಲ’

ಮಾಧ್ಯಮಗಳ ವಿರುದ್ಧ ಜಾಮೀನು ಅರ್ಜಿದಾರರ ಪರ ವಕೀಲರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
‘ವಿದ್ವತ್‌ಗೆ ಏನೂ ಆಗೇ ಇಲ್ಲ, ನಲಪಾಡ್‌ ಹಲ್ಲೆ ನಡೆಸಿಲ್ಲ’
‘ವಿದ್ವತ್‌ಗೆ ಏನೂ ಆಗೇ ಇಲ್ಲ, ನಲಪಾಡ್‌ ಹಲ್ಲೆ ನಡೆಸಿಲ್ಲ’   

ಬೆಂಗಳೂರು: ‘ವಿದ್ವತ್‌ಗೆ ಏನೂ ಆಗಿಲ್ಲ. ಆತ ಬೇಕಂತಲೇ ಆಸ್ಪತ್ರೆಯಲ್ಲಿ ಸುಖಾಸುಮ್ಮನೇ ಚಿಕಿತ್ಸೆ ಪಡೆಯುತ್ತಾ ಒಳರೋಗಿಯಾಗಿದ್ದಾನೆ. ಮನೆಗೆ ಹೋಗು ಎಂದರೆ ಒಂದಲ್ಲಾ ಒಂದು ನೆಪ ಹೇಳಿ ಹಾಸಿಗೆಗೆ ಅಂಟಿಕೊಂಡಿದ್ದಾನೆ. ಈತನ ಮೇಲೆ ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಹಲ್ಲೆ ನಡೆಸಿಲ್ಲ. ಬೇಕಾದರೆ ವಿದ್ವತ್‌ ಆರೋಗ್ಯದ ಬಗ್ಗೆ ಮಲ್ಯ ಆಸ್ಪತ್ರೆ ವೈದ್ಯರು ಕೊಟ್ಟಿರುವ ವರದಿಯನ್ನೇ ನೋಡಿದರೆ ಸಾಕು. ಎಲ್ಲವೂ ಸ್ಪಷ್ಟವಾಗುತ್ತದೆ...!’

ಜಾಮೀನು ಕೋರಿ ನಲಪಾಡ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಹಿರಿಯ ವಕೀಲ ಸಿ.ವಿ.ನಾಗೇಶ್‌ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ಮಂಡಿಸಿದ ವಾದ ಸರಣಿಯಿದು.

‘ವಿದ್ವತ್‌ಗೆ ದೇಹದ ಮೇಲೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಎಲ್ಲೊ ಒಂದು ಕೂದಲೆಳೆಯಷ್ಟು ಮೂಳೆ ಮುರಿದಿದೆ. ಫರ್ಜಿ ಕೆಫೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದೇ ಇಲ್ಲ. ಮಾಧ್ಯಮಗಳು ಅದರಲ್ಲೂ ಟಿ.ವಿ.ಚಾನೆಲ್‌ಗಳು ಈ ವಿಷಯವನ್ನೇ ದೊಡ್ಡದು ಮಾಡಿ ತೋರಿಸುತ್ತಿವೆ’ ಎಂದು ಆಕ್ಷೇಪಿಸಿದರು.

ADVERTISEMENT

‘ದೂರು ದಾಖಲಾದ ನಂತರ ನಲಪಾಡ್‌ ಸ್ವತಃ ಪೊಲೀಸರಿಗೆ ಶರಣಾಗಿದ್ದಾರೆ. ಅವರು ವಿದ್ವತ್‌ ಮೇಲೆ ಹಲ್ಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಪೂರ್ವ ತಯಾರಿಯೂ ಅವರಿಗಿರಲಿಲ್ಲ. ಅಷ್ಟೇಕೆ, ಅವರು ಹಲ್ಲೆ ಪ್ರಯತ್ನವನ್ನೇ ಮಾಡಿಲ್ಲ. ಹಾಗಾಗಿ ಜಾಮೀನು ನೀಡಬೇಕು’ ಎಂದು ಕೋರಿದರು.

ದೂರುದಾರರು ಹೇಳಿದಂತೆ ಆರೋಪಿಗಳು ಯಾವುದೇ ಬಾಟಲಿ ಅಥವಾ ಮಾರಣಾಂತಿಕ ಆಯುಧ ಬಳಸಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಒಡೆಯದ ಬಾಟಲಿಗಳನ್ನೂ ಮಾರಕ ಆಯುಧವಾಗಿ ಪ್ರಯೋಗಿಸಬಹುದಲ್ಲವೇ‘ ಎಂದು ಪ್ರಶ್ನಿಸಿದರು.

ನಾಗೇಶ್‌ ವಾದ ಸರಣಿಯನ್ನು ಬಲವಾಗಿ ಆಕ್ಷೇಪಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಂ.ಎಸ್‌.ಶ್ಯಾಮಸುಂದರ್, ‘ತನಿಖಾಧಿಕಾರಿಗಳು ವೈದ್ಯರ ವರದಿ ನೀಡುವಂತೆ ಹಲವು ಬಾರಿ ಕೇಳಿದ್ದರೂ ಕೊಟ್ಟಿಲ್ಲ. ವಾಸ್ತವದಲ್ಲಿ ಇದೊಂದು ಗೋಪ್ಯ ವರದಿ. ಇದನ್ನು ರೋಗಿ ಹೊರತುಪಡಿಸಿ ಬೇರಾರಿಗೂ ಕೊಡುವಂತಿಲ್ಲ. ಆದರೆ, ಇದು ವಕೀಲರ ಕೈಗೆ ಹೇಗೆ ದೊರೆಯಿತೊ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

‘ಇಡೀ ವರದಿ ಆರೋಪಿಗೆ ಕ್ಲೀನ್ ಚಿಟ್‌ ನೀಡಿದಂತಿದೆ. ಈ ವರದಿಯನ್ನು ಎನ್‌.ಎ.ಹ್ಯಾರಿಸ್‌ ತಮ್ಮ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾರೆ. ಇದನ್ನು ನೀಡಿರುವ ವೈದ್ಯ ಆನಂದ್‌ ಶಾಸಕ ಎನ್‌.ಎ.ಹ್ಯಾರಿಸ್‌ ಅವರಿಗೆ ಬೇಕಾದ ವ್ಯಕ್ತಿ. ನಲಪಾಡ್‌ಗೆ ಜಾಮೀನು ಕೊಟ್ಟರೆ ಹೊರಗೆ ಬಂದ ಮೇಲೆ ಸಾಕ್ಷ್ಯ ನಾಶ ಮಾಡುವುದರಲ್ಲಿ ಸಂಶಯವೇ ಇಲ್ಲ’ ಎಂದೂ ಹೇಳಿದರು.

‘ವಿದ್ವತ್‌ ಮೇಲೆ ನಲಪಾಡ್‌ ಮತ್ತು ಆತನ ಸಹಚರರು ಹಲ್ಲೆ ನಡೆಸಿರುವುದಕ್ಕೆ ಸ್ಪಷ್ಟವಾದ ವಿಡಿಯೊ ದಾಖಲೆಗಳಿವೆ. ಆರೋಪಿಗಳು ಕೈಗೆ ನಕ್ಕಲ್‌ ರಿಂಗ್‌ಗಳನ್ನು ಧರಿಸಿಕೊಂಡು ಅತ್ಯಂತ ಅಮಾನುಷವಾಗಿ ಥಳಿಸಿದ್ದಾರೆ. ಇದಕ್ಕೆ ಕೆಫೆಯಲ್ಲಿದ್ದ ನೂರಕ್ಕೂ ಹೆಚ್ಚು ಜನ ಸಾಕ್ಷಿಗಳಿದ್ದಾರೆ. ಸ್ವತಃ ಕೆಫೆಯ ಮಾಲೀಕನೇ ಬಂದು ಹೊಡೆಯಬೇಡಿ ಎಂದು ಕೇಳಿಕೊಂಡರೂ ಬಿಟ್ಟಿಲ್ಲ. ಇದೊಂದು ಕ್ರೌರ್ಯದ ಪರಮಾವಧಿ’ ಎಂದು ವಿವರಿಸಿದರು.

‘ಥಳಿಸಿದ ನಂತರ ವಿದ್ವತ್‌ನನ್ನು ದರದರನೆ ಹೊರಗೆಳೆದುಕೊಂಡು ಬಂದು ಮತ್ತೆ ಮತ್ತೆ ಮನಸೋಇಚ್ಛೆ ಹೊಡೆದಿದ್ದಾರೆ. ಅಷ್ಟು ಸಾಲದೆಂಬಂತೆ ಮಲ್ಯ ಆಸ್ಪತ್ರೆಗೆ ನುಗ್ಗಿ ಅಲ್ಲಿಯೂ ತಮ್ಮ ಪರಾಕ್ರಮ ಮೆರೆದಿದ್ದಾರೆ. ಹಲ್ಲೆ ನಡೆದ ದಿನ ರಾತ್ರಿ 11.30ಕ್ಕೆ ದೂರು ದಾಖಲಾದರೆ ಅದನ್ನು ದಾಖಲು ಮಾಡಿಕೊಂಡಿರುವುದು ಮಧ್ಯರಾತ್ರಿ 3.30ಕ್ಕೆ. ಪೊಲೀಸರು ಈ ವಿಷಯದಲ್ಲಿ ಪೂರ್ವಗ್ರಹಪೀಡಿತರಾಗಿ ನಡೆದುಕೊಂಡಿದ್ದಾರೆ. ಅದಕ್ಕೆಂದೇ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅವರನ್ನು ಅಮಾನತು ಮಾಡಲಾಗಿದೆ’ ಎಂದರು.

‘ಅರುಣ್‌ ಕುಮಾರ್ ಎಂಬುವರಿಂದ ಪ್ರತಿದೂರು ಕೊಡಿಸಲಾಗಿದೆ. ಘಟನೆ ನಡೆದ ಮೊದಲ ದಿನದಿಂದಲೂ ಆರೋಪಿಗಳು ಸಾಕ್ಷ್ಯನಾಶಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ಮಾಧ್ಯಮಗಳು ಮತ್ತು ಸಾರ್ವಜನಿಕರು ಈ ವಿಷಯದಲ್ಲಿ ನಿರಂತರ ಕಣ್ಣಿಟ್ಟಿರುವುದರಿಂದ ಪ್ರಕರಣವನ್ನು ದುರ್ಬಲಗೊಳಿಸಲು ಸಾಧ್ಯವಾಗಿಲ್ಲ’ ಎಂದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿ ನೀಡಿರುವ ಡಾ.ಆನಂದ್‌ಗೆ ತನಿಖಾಧಿಕಾರಿ ನೋಟಿಸ್‌ ನೀಡಿದ್ದಾರೆ. ವೈದ್ಯಕೀಯ ಮಂಡಳಿಯಿಂದಲೂ ವಿವರಣೆ ಕೋರಲಾಗಿದೆ’ ಎಂದು ತಿಳಿಸಿದ ಶ್ಯಾಮಸುಂದರ್‌, ದೃಶ್ಯಾವಳಿಯ ವಿಡಿಯೊ ದಾಖಲೆಗಳನ್ನು ನ್ಯಾಯಪೀಠಕ್ಕೆ ಒಪ್ಪಿಸಿದರು. ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.