ADVERTISEMENT

ವಿಮಾನ ನಿಲ್ದಾಣಕ್ಕೆ ವಾಯು ವಜ್ರ ಬದಲು ಹಸಿರು ವೊಲ್ವೊ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಬೆಂಗಳೂರು: ಇನ್ನು ಮುಂದೆ ವಿಮಾನ ನಿಲ್ದಾಣಕ್ಕೆ ನಿತ್ಯ ಪ್ರಯಾಣ ಮಾಡುತ್ತಿದ್ದ ಕೆಂಪು ವಾಯು ವಜ್ರ ಬಸ್ಸುಗಳ ಬದಲಾಗಿ ಹಸಿರು ವೊಲ್ವೊ ಬಸ್ಸುಗಳನ್ನು ಬಿಎಂಟಿಸಿಯು ಓಡಿಸಲಿದೆ.

ಏಪ್ರಿಲ್ ತಿಂಗಳ ಅಂತ್ಯದೊಳಗೆ ವಾಯು ವಜ್ರ ಬಸ್ಸುಗಳ ಸ್ಥಾನದಲ್ಲಿ 64 ಹೊಸ ವೊಲ್ವೊ ಬಸ್ಸುಗಳನ್ನು ಬಿಡಲಾಗುವುದು. ವಾಯು ವಜ್ರ ಬಸ್ಸುಗಳಿಗೆ ಬ್ರ್ಯಾಂಡ್ ಅನ್ನು ನಿರ್ಮಿಸುವ ಉದ್ದೇಶದಿಂದ ಈ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿಯ ಮುಖ್ಯ ಸಾರಿಗೆ ವ್ಯವಸ್ಥಾಪಕ ಪ್ರಭು ದಾಸ್ ಹೇಳಿದರು.

`ಹೊಸದಾಗಿ ನಿರ್ಮಿಸಿರುವ ಎಸಿಯಲ್ಲದ ಬಿಎಸ್ 4 ಬಸ್ಸುಗಳು ಜನರಲ್ಲಿ ಗೊಂದಲ ಉಂಟುಮಾಡಿವೆ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ~ ಎಂದರು.

ಹೊಸದಾದ ಕೆಂಪು ಬಸ್ಸನ್ನು ನೋಡಿ ಅದು ವೊಲ್ವೊ ಬಸ್ಸಿರಬಹುದು ಎಂದು ಯೋಚಿಸಿದರೆ, ಅದು ಸಾಮಾನ್ಯ ಬಸ್ಸಾಗಿತ್ತು. ಅದೇ ರೀತಿಯ ಬಣ್ಣದ ಬಸ್ಸು ಮತ್ತು ಅದೇ ನಂಬರಿನ ಬಸ್ಸು ನೋಡಿ ಮನಸ್ಸಿಗೆ ಗೊಂದಲವಾಯಿತು. ಇದು ವೊಲ್ವೊ ಅಥವಾ ಸಾಮಾನ್ಯ ಬಸ್ಸು ಎಂಬುದನ್ನು ಕಂಡುಹಿಡಿಯಲಾಗಲಿಲ್ಲ. ಆದರೆ, ಹೊಸ ಬಸ್ಸು, ಮತ್ತು ಟಿಕೆಟ್ ದರವು ಸಹ ಅಷ್ಟೆಯಿರುವುದರಿಂದ ಕಿರಿ ಕಿರಿಯಾಗಲಿಲ್ಲ ಎಂದು ನಿತ್ಯ ಬಸ್ಸಿನಲ್ಲಿ ಪ್ರಯಾಣಿಸುವ ಕೃಷ್ಣ ಕುಮಾರ್ ಹೇಳಿಕೊಂಡರು.

ಕೃಷ್ಣಕುಮಾರರಂತೆ ಹಲವು ಜನರು ಗೊಂದಲಗಳಿಗೆ ಈಡಾಗಿದ್ದಾರೆ. ಆದರೆ, ಮೊದಲ ಒಂದು ವಾರ ಮಾತ್ರ ಈ ರೀತಿಯ ಗೊಂದಲವಾಗಿದೆ. ಈಗ ಸಾರ್ವಜನಿಕರು ಬಸ್ಸುಗಳನ್ನು ಮುಕ್ತವಾಗಿ ಬಳಸುತ್ತಿದ್ದಾರೆ ಎಂದು ದಾಸ್ ಹೇಳಿದರು.

ಬೆಂಗಳೂರಿನ ಮೂಲಭೂತ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಸೂಚಿಯ ಸದಸ್ಯ ಅಶ್ವಿನ್ ಮಹೇಶ್ ಮಾತನಾಡಿ, `ಬಸ್ಸುಗಳ ಬಣ್ಣದಲ್ಲಿ ಯಾವುದಾದರೂ ಒಂದು ಅರ್ಥವಿರುವಂತಿರಬೇಕು. ಆದರೆ, ಬಿಎಂಟಿಸಿ ಬಸ್ಸುಗಳ ಬಣ್ಣಗಳಿಗೆ ಯಾವುದೇ ಅರ್ಥವಿಲ್ಲ~ ಎಂದರು.


5ರಂದು ಬಸ್ ದಿನಾಚರಣೆ
ಬೆಂಗಳೂರು: ನಗರದ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪರಿಸರ ರಕ್ಷಿಸಿ ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸಲು ಇದೇ 5ರಂದು ಬಸ್ ದಿನಾಚರಣೆ ನಡೆಸಲು ಬಿಎಂಟಿಸಿ ಸಿದ್ದತೆ ನಡೆಸಿದೆ.

ಹಳೆ ವಿಮಾನ ನಿಲ್ದಾಣ ರಸ್ತೆ (ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತೆಗಳನ್ನು ಬಸ್ ದಿನಕ್ಕೆ ಆಯ್ದುಕೊಳ್ಳಲಾಗಿದೆ.

1,500ಕ್ಕೂ ಹೆಚ್ಚು ಸಾಮಾನ್ಯ ಪಾಳಿ ವಾಹನಗಳನ್ನು ರಾತ್ರಿ 7ರ ಬಳಿಕ 10 ಗಂಟೆ ವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ 3,000 ಹೆಚ್ಚುವರಿ ಸಂಚಾರ (ಸುತ್ತುವಳಿ) ನಡೆಸಲಾಗುವುದು. ಈ ಮಾರ್ಗದಲ್ಲಿ 100 ಹೆಚ್ಚುವರಿ ವಾಹನಗಳನ್ನು ನಿಯೋಜಿಸಲಾಗುವುದು.

ಇದರಿಂದ ಸುಮಾರು 800ರಷ್ಟು ಸಂಚಾರ ನಡೆಸಲು ಸಾಧ್ಯವಾಗುತ್ತದೆ. ಸಂಸ್ಥೆಯಲ್ಲಿ ಈ ವರ್ಷ 250 ಸಾಮಾನ್ಯ ವಾಹನ, 10 ಪುಷ್ಪಕ್ ಪ್ಲಸ್ ವಾಹನ, 27 ವೋಲ್ವೊ ಹಾಗೂ 8 ಕರೋನ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.