ADVERTISEMENT

ವೃದ್ಧನಿಗೆ ಹೆಲ್ಮೆಟ್‌ನಿಂದ ಹೊಡೆದ ಹೆಡ್‌ಕಾನ್‌ಸ್ಟೆಬಲ್

ಸಿಗ್ನಲ್‌ನಲ್ಲಿ ದಾರಿ ಬಿಡುವಂತೆ ವಾಗ್ವಾದ: ತಾಳ್ಮೆ ಕಳೆದುಕೊಂಡ ಜಯರಾಮ್‌ಗೆ ಅಮಾನತಿನ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 20:02 IST
Last Updated 2 ಜುಲೈ 2017, 20:02 IST
ಹೆಡ್‌ಕಾನ್‌ಸ್ಟೆಬಲ್ ಸಾರ್ವಜನಿಕರ ನಡುವೆ ವಾಗ್ವಾದ
ಹೆಡ್‌ಕಾನ್‌ಸ್ಟೆಬಲ್ ಸಾರ್ವಜನಿಕರ ನಡುವೆ ವಾಗ್ವಾದ   

ಬೆಂಗಳೂರು: ಸಿಗ್ನಲ್‌ನಲ್ಲಿ ದಾರಿ ಬಿಡುವಂತೆ ವಾಗ್ವಾದ ನಡೆಸಿದರೆಂಬ ಕಾರಣಕ್ಕೆ ವಿಜಯನಗರ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೆಬಲ್ ಜಯರಾಮ್  ಅವರು ರಾಮಕೃಷ್ಣ (65) ಎಂಬುವರ ಮುಖಕ್ಕೆ ಹೆಲ್ಮೆಟ್‌ನಿಂದ ಹೊಡೆದಿದ್ದಾರೆ.

ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ವಿಜಯನಗರ ವಾಟರ್‌ ಟ್ಯಾಂಕ್ ಬಳಿ ಈ ಘಟನೆ ನಡೆದಿದೆ. ತಾಳ್ಮೆ ಕಳೆದುಕೊಂಡು ಹಲ್ಲೆ ಮಾಡಿದ ತಪ್ಪಿಗೆ ಜಯರಾಮ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಂಚಾರ ವಿಭಾಗದ ಡಿಸಿಪಿ ಶೋಭಾರಾಣಿ ಆದೇಶಿಸಿದ್ದಾರೆ.

‘ಸ್ವಲ್ಪ ಮುಂದೆ ಹೋಗಯ್ಯ’: ನಾಗರಬಾವಿ ನಿವಾಸಿಯಾದ ರಾಮಕೃಷ್ಣ, ಕೆಲಸದ ನಿಮಿತ್ತ ಮಧ್ಯಾಹ್ನ ವಿಜಯನಗರಕ್ಕೆ ಬಂದಿದ್ದರು. ಇದೇ ವೇಳೆ ಬೈಕ್‌ನಲ್ಲಿ ಠಾಣೆಯತ್ತ ಹೊರಟಿದ್ದ ಜಯರಾಮ್, ಕೆಂಪು ಸಿಗ್ನಲ್‌ ಬಿದ್ದಿದ್ದರಿಂದ ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು.

ADVERTISEMENT

ಆಗ ಅವರ ಹಿಂದೆಯೇ ಕಾರಿನಲ್ಲಿದ್ದ ರಾಮಕೃಷ್ಣ, ಮೂರ್ನಾಲ್ಕು ಸಲ ಹಾರ್ನ್ ಮಾಡಿದ್ದಾರೆ. ಇದರಿಂದ ಕೆರಳಿದ ಹೆಡ್‌ಕಾನ್‌ಸ್ಟೆಬಲ್, ‘ರೆಡ್ ಸಿಗ್ನಲ್ ಬಿದ್ದಿರುವುದು ಕಾಣಿಸುತ್ತಿಲ್ಲವೇ’ ಎಂದಿದ್ದಾರೆ. ಅದಕ್ಕೆ ಅವರು, ‘ಸ್ವಲ್ಪ ಮುಂದೆ ಹೋಗಯ್ಯ. ನಾನು ಬಲಕ್ಕೆ ಹೋಗಬೇಕು’ ಎಂದಿದ್ದಾರೆ. ಆಗ ಸಿಗ್ನಲ್ ಬಿಡುವವರೆಗೂ ಕಾಯುವಂತೆ ಜಯರಾಮ್ ಸೂಚಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಅವರು ಕಾರಿನಿಂದ ಇಳಿದು ಬಂದಿದ್ದಾರೆ. ಆಗ ಪರಸ್ಪರರ ನಡುವೆ ವಾಗ್ವಾದ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಜಯರಾಮ್, ಹೆಲ್ಮೆಟ್‌ನಿಂದ ಮುಖಕ್ಕೆ ಹೊಡೆದಿದ್ದಾರೆ. ಕೆಳಗೆ ಬಿದ್ದಾಗ ಹಣೆಗೆ ಕಲ್ಲು ಬಡಿದು ರಕ್ತ ಸುರಿಯಲಾರಂಭಿಸಿದೆ.

ಸವಾರರ ಆಕ್ರೋಶ: ಹೆಡ್‌ಕಾನ್‌ಸ್ಟೆಬಲ್ ವರ್ತನೆಯಿಂದ ಕೆರಳಿದ ಇತರೆ ವಾಹನಗಳ ಸವಾರರು, ಸ್ಥಳದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

‘ನಮ್ಮದು ಶಿಸ್ತಿನ ಇಲಾಖೆ ಎಂದು ಹೇಳಿಕೊಳ್ಳುವ ಪೊಲೀಸರು, ಈ ರೀತಿ ನಡುರಸ್ತೆಯಲ್ಲಿ ಹಿರಿಯ ನಾಗರಿಕರ ಮೇಲೆ ಹಲ್ಲೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ತಪ್ಪಿತಸ್ಥ ಹೆಡ್‌ಕಾನ್‌ಸ್ಟೆಬಲ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಡಿಸಿಪಿ ಶೋಭಾರಾಣಿ ಅವರು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತು. ಸಮೀಪದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದ ರಾಮಕೃಷ್ಣ ಅವರು, ನಂತರ ವಿಜಯನಗರ ಕಾನೂನು ಸುವ್ಯವಸ್ಥೆ ಠಾಣೆಗೆ ತೆರಳಿ ಹೆಡ್‌ಕಾನ್‌ಸ್ಟೆಬಲ್ ವಿರುದ್ಧ ದೂರು ಕೊಟ್ಟರು. ಹಲ್ಲೆ (ಐಪಿಸಿ 323) ಆರೋಪದಡಿ ಪ್ರಕರಣ ದಾಖಲಾಗಿದೆ.

***

‘ಇನ್ನಾದರೂ ತಿದ್ದಿಕೊಳ್ಳಿ’
ಜಯರಾಮ್ ಅವರನ್ನು ಅಮಾನತು ಮಾಡಿರುವ ಬಗ್ಗೆ ಡಿಸಿಪಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ‘ವಿಜಯನಗರ ಸಂಚಾರ ಪೊಲೀಸರು ಹಿರಿಯರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅವರು ಇನ್ನಾದರೂ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

‘2016ರ ಜೂನ್ 2ರಂದು ವಿಜಯನಗರ ಮೆಟ್ರೊ ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ನನ್ನ ತಂದೆ ಸಾವನ್ನಪ್ಪಿದರು. ಆ ಪ್ರಕರಣದ ತನಿಖೆ ಎಲ್ಲಿಗೆ
ಬಂತು ಎಂಬ ಬಗ್ಗೆ ಪೊಲೀಸರು ಈವರೆಗೂ ಮಾಹಿತಿ ಕೊಟ್ಟಿಲ್ಲ. ಅದರ ಬಗ್ಗೆ ಕೇಳಲು ಹಲವು ಸಲ ಠಾಣೆಗೆ ಹೋಗಿ ಬಂದರೂ ಪ್ರಯೋಜನವಾಗಿಲ್ಲ’ ಎಂದು ದ್ವಾರಕಿ ರಾವ್ ಎಂಬುವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.