ADVERTISEMENT

ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:45 IST
Last Updated 18 ಜುಲೈ 2012, 19:45 IST

ಬೆಂಗಳೂರು: `ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ವಿರೋಧಿಸುತ್ತಿರುವ ಕೂಸ್ಮಾದ ಅಧ್ಯಕ್ಷ ಜಿ.ಎಸ್.ಶರ್ಮಾ ಅವರ ವಿರುದ್ಧ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು~ ಎಂದು ಭಾರತ ವಿದ್ಯಾರ್ಥಿ ಕ್ರಿಯಾ ಸಮಿತಿ ಅಧ್ಯಕ್ಷ ಸೂರ್ಯ ಮುಕುಂದರಾಜ್ ಆಗ್ರಹಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಾಲೆಗಳು ದೇವಾಲಯವಿದ್ದಂತೆ ಆದರೇ, ಈ ದೇವಾಲಯಗಳನ್ನು ನಡೆಸುತ್ತಿರುವವರು ಮಾತ್ರ ನರ ರೂಪದ ರಾಕ್ಷಸರಂತೆ ವರ್ತಿಸುತ್ತಿದ್ದು, ಸಮಾಜದ  ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿ ಮತ್ತು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದ ಶಾಲೆಗಳೆ ಹೊಣೆಗಾರಿಕೆಯನ್ನು ಸಮುದ್ರಕ್ಕೆ ಎಸೆಯುತ್ತಿರುವ ಶರ್ಮಾರಂತಹ ಶಿಕ್ಷಣ ವ್ಯಾಪಾರಸ್ಥರಿಂದ ಇಂದು ಮಕ್ಕಳಿಗೆ ಮೌಲ್ಯವಿಲ್ಲದ ಶಿಕ್ಷಣ ದೊರಕುತ್ತದೆ~ ಎಂದರು

`ಸಮಾಜದಲ್ಲಿ ಸಮಾನತೆಯನ್ನು ಹೇಳಬೇಕಾದ ಶಾಲೆಗಳ ಮುಖ್ಯಸ್ಥರು ಶಿಕ್ಷಣದಲ್ಲಿ ಧರ್ಮ, ಜಾತಿಯನ್ನು ತರುವ ಮೂಲಕ ಸಮಾಜದ ಸಾಮರಸ್ಯವನ್ನು ಕದಡುತ್ತಿದ್ದು, ಬಡವರಿಗೆ ಸೀಟು ನೀಡದೇ ಹಣವಂತರಿಗೆ ಮಣೆ ಹಾಕುತ್ತಿರುವ ಇವರು ಒಂದು ರೀತಿಯಲ್ಲಿ ಶೈಕ್ಷಣಿಕ ಭಯೋತ್ಪಾದರು~ ಎಂದು ಆರೋಪಿಸಿದ್ದಾರೆ.

`ಪಾಲಕರು ಜಾಗೃತರಾಗಿ ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸುವ ಆಸೆಯಲ್ಲಿ ಇಂತಹ ವ್ಯಾಪಾರಿ ಉದ್ದೇಶದ ಶಾಲೆಗಳಿಗೆ ಸೇರಿಸಿ ಮಕ್ಕಳ ಮನಸ್ಸನ್ನು ಹಾಳು ಮಾಡುವ ಬದಲು ಮಾನವೀಯ ಮೌಲ್ಯಗಳಿಗೆ ಹತ್ತಿರವಾಗುವ ಸರ್ಕಾರಿ ಶಾಲೆಗಳು ಉತ್ತಮವಾಗಿವೆ.
 
ಕುಸ್ಮಾದ ಕಡ್ಡಾಯ ಶಿಕ್ಷಣ ಕಾಯ್ದೆಯ ವಿರುದ್ದ ಹೋರಾಟ ಯಾವುದೇ ದೃಷ್ಟಿಕೋನದಿಂದ ನೋಡಿದರು ಸಮಾಜ ಪರ ಕಾಳಜಿಗಳಿಲ್ಲ. ಈ ಕಾಯ್ದೆ ಅಡಿಯಲ್ಲಿ ಸೇರುವ ಮಕ್ಕಳನ್ನು ಅಸ್ಪೃಶ್ಯರಂತೆ ಬೇರೆ ಮಕ್ಕಳಿಂದ ದೂರವಿಡುತ್ತಿರುವ ಖಾಸಗಿ ಶಾಲೆಗಳಿಗೆ ಬೀಗ ಹಾಕಿಸಬೇಕು~ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿ.ಸಿ.ಎಫ್ ಮುಖ್ಯ ಸಂಚಾಲಕ ಡಾ.ಪಿ.ವಿ.ನಿರಂಜನಾರಾಧ್ಯ, ಸ್ಪರ್ಧಾಗೈಡ್ ಸಂಪಾದಕ ಚೇತನ್ ಕುಮಾರ್ ಲಿಂಗದಹಳ್ಳಿ ಹಾಗೂ ಭಾರತ ವಿದ್ಯಾರ್ಥಿ ಕ್ರಿಯಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಂ.ಚೇತನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.