ADVERTISEMENT

ಶಾಲೆ ಜಾಗದಲ್ಲಿ ಮೊಬೈಲ್ ಟವರ್: ನೋಟಿಸ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಶಾಲಾ ಆವರಣದಲ್ಲಿ ಮೊಬೈಲ್ ಕಂಪೆನಿಯೊಂದು ಟವರ್ ಅಳವಡಿಸುತ್ತಿರುವುದಕ್ಕೆ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

`ಇದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೆ, ಇದೆಂಥ ಕ್ರಮ~ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಈ ಹಿನ್ನೆಲೆಯಲ್ಲಿ ಸರ್ಕಾರದ ವಾದವನ್ನು ಆಲಿಸಬಯಸಿದ ಪೀಠ, ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿತು.

ನ್ಯಾಯಮೂರ್ತಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, `ಮೊಬೈಲ್ ಟವರ್‌ಗಳಿಂದ ಮನುಷ್ಯರ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಇನ್ನೂ ಪರಿಶೀಲನೆ ನಡೆಯುತ್ತಿದೆ. ಬಹುತೇಕ ಹೈಕೋರ್ಟ್‌ಗಳಲ್ಲಿ ಇದೇ ವಿಚಾರವಾಗಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿತ್ತು. ಆದರೆ ಸಮಿತಿಯ ಸದಸ್ಯರಲ್ಲಿ ವಿಭಿನ್ನ ನಿಲುವು ವ್ಯಕ್ತವಾಗಿದೆ. ಟವರ್ ಅಳವಡಿಕೆ ಕುರಿತು ಇಲ್ಲಿಯ ಹೈಕೋರ್ಟ್‌ನಲ್ಲಿಯೂ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ~ ಎಂದರು.

ಕರ್ನಾಟಕದಲ್ಲಿ ಈ ಕುರಿತು ಯಾವುದೇ ಸಮಿತಿ ಇದುವರೆಗೆ ರಚನೆಗೊಂಡಿಲ್ಲವೇ ಎಂದು ನ್ಯಾ. ಸೇನ್ ಪ್ರಶ್ನಿಸಿದರು. ಅದಕ್ಕೆ ವಕೀಲರು, `ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ~ ಎಂದರು.

ಚಿಕ್ಕಮಗಳೂರಿನ ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಗ್ರಾಮದಲ್ಲಿನ ಅಭಿನವ ರಮಣಾನಂದ ಪ್ರೌಢಶಾಲೆಯ ಆವರಣದಲ್ಲಿ ನಿಯಮ ಉಲ್ಲಂಘಿಸಿ ಟವರ್ ಅಳವಡಿಕೆ ಮಾಡಲಾಗುತ್ತಿದೆ ಎಂದು ದೂರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಸದ್ಯ ಅಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪೀಠ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.