ADVERTISEMENT

ಶಿಥಿಲಾವಸ್ಥೆಯಲ್ಲಿರುವ ಟ್ರಾನ್ಸ್‌ಫಾರ್ಮರ್‌ ಕಂಬ

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 20:12 IST
Last Updated 11 ಜೂನ್ 2017, 20:12 IST
ಶಿಥಿಲಾವಸ್ಥೆಯಲ್ಲಿರುವ ಟ್ರಾನ್ಸ್‌ಫಾರ್ಮರ್‌ ಕಂಬ
ಶಿಥಿಲಾವಸ್ಥೆಯಲ್ಲಿರುವ ಟ್ರಾನ್ಸ್‌ಫಾರ್ಮರ್‌ ಕಂಬ   

ಬೆಂಗಳೂರು: ಸಿ.ವಿ.ರಾಮನ್‌ ವಾರ್ಡ್‌ನ ಟ್ರಿನಿಟಿ ಎನ್‌ಕ್ಲೆವ್‌ ಬಳಿಯಲ್ಲಿನ ಟ್ರಾನ್ಸ್‌ಫಾರ್ಮರ್‌ ಹೊತ್ತು ನಿಂತಿರುವ ಕಂಬವೊಂದು ಶಿಥಿಲಾವಸ್ಥೆಗೆ ತಲುಪಿದೆ.
ಹೊಸ ಕಂಬವನ್ನು ಹಾಕುವಂತೆ ಸ್ಥಳೀಯ ನಿವಾಸಿಗಳು ಬೆಸ್ಕಾಂಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ.

‘ಟ್ರಾನ್ಸ್‌ಫಾರ್ಮರ್‌ ಪಕ್ಕವೇ ಹಳೆ ಮದ್ರಾಸ್‌ ರಸ್ತೆಯಿಂದ ನಾಗವಾರಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿದೆ. ಸಾವಿರಾರು ವಾಹನಗಳು ಇಲ್ಲಿ ನಿತ್ಯ ಸಂಚರಿಸುತ್ತವೆ. ಮಳೆಗೆ ಅಚಾನಕ್ಕಾಗಿ ಕಂಬ ಬಿದ್ದರೆ ಜೀವಹಾನಿಯೂ ಸಂಭವಿಸಲಿದೆ’ ಎನ್ನುತ್ತಾರೆ ಟ್ರಿನಿಟಿ ಅಪಾರ್ಟ್‌ಮೆಂಟ್‌ನ ನಿವಾಸಿ ಆರ್‌.ಕೆ.ರಾಯ್‌.
‘ಹೊಸ ವಿದ್ಯುತ್‌ಕಂಬ ಅಳವಡಿಸುವಂತೆ 2 ತಿಂಗಳಿನಿಂದ ಬೆಸ್ಕಾಂಗೆ ಮನವಿ ಮಾಡುತ್ತಿದ್ದೇವೆ. ಸಿಬ್ಬಂದಿ ಬಂದು ಕಂಬದ ಸ್ಥಿತಿ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಈವರೆಗೂ ಕೆಲಸ ಆರಂಭವಾಗಿಲ್ಲ’ ಎಂದು ಪ್ರದೇಶದ ನಿವಾಸಿ ಚಂದ್ರಶೇಖರ್‌ ತಿಳಿಸಿದರು.

ಅಧಿಕಾರಿಗಳ ಪ್ರತಿಕ್ರಿಯೆ: ‘ವಿದ್ಯುತ್‌ ಕಂಬದ ದುಸ್ಥಿತಿ ಗಮನಕ್ಕೆ ಬಂದಿದೆ. ಮೂರು ಹೊಸ ಆರ್‌ಸಿಸಿ ಕಂಬಗಳನ್ನು ಹಾಕಲು ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಸೋಮವಾರ(ಇಂದು) ಸಭೆಯಿದೆ. ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. 15 ದಿನಗಳ ಒಳಗಾಗಿ ಹೊಸ ಕಂಬಗಳನ್ನು ಅಳವಡಿಸುತ್ತೇವೆ’ ಎಂದು ಸಿ.ವಿ.ರಾಮನ್‌ ವಾರ್ಡ್‌ನ ಸಹಾಯಕ ಎಂಜಿನಿಯರ್‌ (ಬೆಸ್ಕಾಂ) ತ್ರಿವೇಣ್‌ ಕುಮಾರ್‌ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.