ADVERTISEMENT

ಶೀಘ್ರವೇ ನರ್ಸಿಂಗ್‌, ಅರೆ ವೈದ್ಯಕೀಯ ಶಿಕ್ಷಣ ಪ್ರಾಧಿಕಾರ ಅಸ್ತಿತ್ವಕ್ಕೆ

ಎ.ಎಂ.ಸುರೇಶ
Published 11 ಡಿಸೆಂಬರ್ 2013, 19:51 IST
Last Updated 11 ಡಿಸೆಂಬರ್ 2013, 19:51 IST

ಬೆಂಗಳೂರು: ನರ್ಸಿಂಗ್‌ ಶಾಲೆಗಳಲ್ಲಿ ನಡೆಯು­ತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ನರ್ಸಿಂಗ್‌, ಅರೆ ವೈದ್ಯಕೀಯ ಶಿಕ್ಷಣ ಪ್ರಾಧಿಕಾರ ರಚಿಸಲಾಗು­ತ್ತಿದ್ದು, ವಾರದಲ್ಲಿ ಅಸ್ತಿತ್ವಕ್ಕೆ ಬರಲಿದೆ

ರಾಜ್ಯದಲ್ಲಿನ ನರ್ಸಿಂಗ್‌ ಶಾಲೆಗಳ ಮಾನ್ಯತೆ ನವೀಕರಣ ಮತ್ತು ಡಿಪ್ಲೊಮಾ ಪರೀಕ್ಷೆ ನಡೆಸು­ವುದು ಪ್ರಾಧಿಕಾರದ ಮುಖ್ಯ ಜವಾಬ್ದಾರಿ­ಯಾಗಿದೆ. ಇದು ಅಸ್ತಿತ್ವಕ್ಕೆ ಬಂದ ಕೂಡಲೇ ಹಾಲಿ ಇರುವ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ರದ್ದಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು  ‘ಪ್ರಜಾವಾಣಿ’ಗೆ ತಿಳಿಸಿದರು.

ನರ್ಸಿಂಗ್‌ ಶಾಲೆಗಳು ಮತ್ತು ಅರೆವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿ­ರ್ವ­­ಹಿ­ಸಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು. ಅಕ್ರಮಗಳಿಗೆ ಆಸ್ಪದ ಇರಬಾರದು ಎಂಬ ಉದ್ದೇಶದಿಂದ ಮೊದಲ ಬಾರಿಗೆ ಪ್ರಾಧಿಕಾರ ರಚಿಸಲಾಗುತ್ತಿದೆ.

ಪ್ರಾಧಿಕಾರ ರಚನೆ ಸಂಬಂಧ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿಧಾನಮಂಡಲದಲ್ಲಿ ಮಸೂದೆಗೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಅದಕ್ಕೆ ರಾಜ್ಯಪಾಲರ ಒಪ್ಪಿಗೆ ನೀಡುವ ವೇಳೆಗೆ ವಿಧಾನಸಭಾ ಚುನಾವಣೆ ಘೋಷಣೆಯಾ­ಯಿತು. ಹೀಗಾಗಿ ನಿಯಮಾವಳಿಗಳು ರಚನೆಯಾ­ಗುವುದು ನನೆಗುದಿಗೆ ಬಿದ್ದಿತ್ತು.

ಈಚೆಗೆ ಕರಡು ನಿಯಮಾವಳಿಗಳನ್ನು ರೂಪಿಸಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು. ಆದರೆ, ಸಾರ್ವಜನಿಕರಿಂದ ಯಾವುದೇ ಆಕ್ಷೇಪ­ಣೆಗಳು ಬಂದಿಲ್ಲ. ಹೀಗಾಗಿ ಕರಡು ನಿಯಮಾ­ವಳಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಾಧಿಕಾರ ರಚನೆಯ ಆದೇಶ ವಾರದಲ್ಲಿ ಹೊರಬೀಳಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಪ್ರಾಧಿಕಾರದಲ್ಲಿ ರಿಜಿಸ್ಟ್ರಾರ್‌, ಮುಖ್ಯಕಾ­ರ್ಯ­­ನಿರ್ವಹಣಾಧಿಕಾರಿ, ಪರೀಕ್ಷಾ ನಿಯಂತ್ರ­ಕರು, ಇಬ್ಬರು ಡೆಪ್ಯೂಟಿ ರಿಜಿಸ್ಟ್ರಾರ್‌­ಗಳು ಸೇರಿದಂತೆ ಹಲವು ಹುದ್ದೆಗಳನ್ನು ಸೃಜಿಸಲಾಗಿದೆ. ಕೆಲವು ಹುದ್ದೆಗಳನ್ನು ನಿಯೋಜನೆ ಮೂಲಕ ಹಾಗೂ ಕೆಲವು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅಧಿಕಾರ ಮೊಟಕು: ಈಗ ನರ್ಸಿಂಗ್‌ ಶಾಲೆಗಳಿಗೆ ಮಾನ್ಯತೆ ನೀಡುವ ಅಧಿಕಾರ ರಾಜ್ಯ ಶುಶ್ರೂಷಾ ಪರಿಷತ್‌ಗೆ (ನರ್ಸಿಂಗ್‌ ಕೌನ್ಸಿಲ್‌) ಇದೆ. ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಅಧಿಕಾರ ಮೊಟಕಾಗಲಿದೆ. ಹೊಸ ಶಾಲೆಗಳಿಗೆ ಮಾನ್ಯತೆ ನೀಡುವ ಹಾಗೂ ಹಳೆ ಶಾಲೆಗಳಿಗೆ ಮಾನ್ಯತೆ ನವೀ­ಕರಿಸುವ ಅಧಿಕಾರ ಪ್ರಾಧಿಕಾರದ ಕೈಸೇರಲಿದೆ.

ನರ್ಸಿಂಗ್ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳ ಹೆಸರು ನೋಂದಾಯಿಸಿಕೊಳ್ಳುವುದು ಹಾಗೂ ದೂರುಗಳು ಬಂದರೆ ಪರಿಶೀಲನೆ ಮಾಡುವು­ದಷ್ಟೇ ಪರಿಷತ್‌ನ ಮುಖ್ಯ ಕೆಲಸವಾಗಲಿದೆ.

ದಾಖಲೆಗಳ ಪ್ರಕಾರ ರಾಜ್ಯದಲ್ಲಿ 676 ನರ್ಸಿಂಗ್‌ ಶಾಲೆಗಳಿವೆ. ಆದರೆ, ಇವುಗಳಲ್ಲಿ ಅರ್ಧದಷ್ಟು ಶಾಲೆಗಳು ನಕಲಿಯಾಗಿವೆ. ಅಲ್ಲದೆ ಶುಶ್ರೂಷಾ ಮಂಡಳಿ ಪಾರದರ್ಶಕವಾಗಿ ಡಿಪ್ಲೊಮಾ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ­ಯಲ್ಲಿ ಪ್ರಾಧಿಕಾರ ರಚಿಸಲಾಗುತ್ತಿದೆ.
ಪ್ರಾಧಿಕಾರದ ಮುಖ್ಯಕಾರ್ಯ ಕಾರ್ಯನಿರ್ವ­ಹಣಾಧಿಕಾರಿಗೆ ಅರೆ ವೈದ್ಯಕೀಯ ಸಂಸ್ಥೆಗಳು, ನರ್ಸಿಂಗ್ ಶಾಲೆ/ಸಂಸ್ಥೆಗಳ ತಪಾಸಣೆ ನಡೆಸುವ ಅಧಿಕಾರ ಇರುತ್ತದೆ.

ಮಂಜೂರಾದ ಸೀಟುಗಳ ಸಂಖ್ಯೆ, ಪ್ರವೇಶ ಪಡೆದವರ ಸಂಖ್ಯೆ, ಆಂತರಿಕ ಮೌಲ್ಯಮಾಪನ ಅಂಕಗಳು, ಗ್ರಂಥಾಲಯ, ಸ್ಥಳಾವಕಾಶ, ಕಟ್ಟಡ ಇತ್ಯಾದಿ ಮೂಲಸೌಕರ್ಯಗಳ ಲಭ್ಯತೆ, ಭಾರ­ತೀಯ ಶುಶ್ರೂಷಾ ಪರಿಷತ್ತಿನ ಮಾರ್ಗ­ಸೂಚಿಗೆ ಅನುಗುಣವಾಗಿ ಕಾರ್ಯನಿರ್ವಹಿ­ಸುತ್ತಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬಹುದು.

ಪಠ್ಯಕ್ರಮ ಸಿದ್ಧಪಡಿಸುವುದು, ಪರೀಕ್ಷೆ ನಡೆಸು­ವುದು, ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ನೀಡುವುದು ಸೇರಿದಂತೆ ನರ್ಸಿಂಗ್ ಮತ್ತು ಅರೆವೈದ್ಯಕೀಯ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಗುಣಮಟ್ಟ ಕಾಪಾಡುವ ಜವಾಬ್ದಾರಿ ಪ್ರಾಧಿಕಾರದ್ದಾಗಿದೆ.

ಮಾನ್ಯತೆ ನೀಡುವಾಗ ವಿಧಿಸುವ ಷರತ್ತುಗ­ಳನ್ನು ಪಾಲಿಸಲು ವಿಫಲವಾದರೆ, ಸ್ಥಳಾವಕಾಶ, ಪಠ್ಯಕ್ರಮ, ಪಠ್ಯಪುಸ್ತಕ, ಸಿಬ್ಬಂದಿ ನೇಮಕ, ಶಿಕ್ಷೆ ಮತ್ತು ವಜಾ ಈ ವಿಷಯಗಳಲ್ಲಿ ಪ್ರಾಧಿಕಾರದ ಆದೇಶ ಪಾಲಿಸದಿದ್ದರೆ ಮಾನ್ಯತೆ ರದ್ದಾಗಲಿದೆ. ಸರ್ಕಾರದ ನಿಯಮಗಳನ್ನು ಮೀರಿ ಸಿಬ್ಬಂದಿ ನೇಮಕ ಮಾಡಿಕೊಂಡರೆ, ನಿಗದಿಗಿಂತ ಹೆಚ್ಚಿನ ಶುಲ್ಕ ಅಥವಾ ದೇಣಿಗೆ ಪಡೆದರೆ ಶಿಸ್ತುಕ್ರಮಕೈಗೊಳ್ಳಲಾಗುತ್ತದೆ.

ದಂಡ: ಶಾಲೆಯನ್ನು ಮುಚ್ಚುವ ಬಗ್ಗೆ ಮೊದಲೇ ತಿಳಿಸದಿದ್ದರೆ, ಉದ್ದೇಶಪೂರ್ವಕವಾಗಿ ಷರತ್ತು­ಗಳನ್ನು ಉಲ್ಲಂಘಿಸಿದರೆ, ವಂತಿಗೆ ಸಂಗ್ರಹಿಸಿದರೆ ಅಂತಹ ಸಂಸ್ಥೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳಿಗೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ನಿಯಮಾವಳಿ ಪ್ರಕಾರ ಶಾಲೆಯನ್ನು ನೋಂದಣಿ ಮಾಡಿಸದಿದ್ದರೆ, ಮಾನ್ಯತೆ ರದ್ದಾದ ನಂತರವೂ ಮುಂದುವರಿಸಿದರೆ, ಮಾನ್ಯತೆ ದೊರೆಯದಿದ್ದರೂ ಶಾಲೆ ನಡೆಸಿದರೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ಒಂದರಿಂದ ಐದು ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.