ADVERTISEMENT

ಶೀಘ್ರ ಜೀವನ ಭತ್ಯೆ ನೀಡಲು ಸೂಚನೆ

ಗಾರ್ಮೆಂಟ್ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2012, 21:41 IST
Last Updated 26 ನವೆಂಬರ್ 2012, 21:41 IST

ಬೆಂಗಳೂರು: ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಿದ್ಧ ಉಡುಪು ಕಾರ್ಖಾನೆ ಕಾರ್ಮಿಕರ ಅಹವಾಲನ್ನು ಸ್ವೀಕರಿಸಿದ ಭಾರತ ನ್ಯಾಯಾಧೀಕರಣ ಸಮಿತಿಯು ಶೀಘ್ರವೇ ಜೀವನ ಭತ್ಯೆ ನೀಡುವಂತೆ ಭಾನುವಾರ ತೀರ್ಪು ಪ್ರಕಟಿಸಿದೆ.

ಬೆಂಗಳೂರು, ತ್ರಿಪುರ ಹಾಗೂ ಗುರಗಾಂವ್‌ನ ಪ್ರಮುಖ ಸಿದ್ಧ ಉಡುಪು ಉತ್ಪಾದಕ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸುಮಾರು 250ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸಮಿತಿಯ ಮುಂದೆ ಕಷ್ಟ ಹಂಚಿಕೊಂಡು ಬೇಡಿಕೆ ಮುಂದಿಟ್ಟರು. ಸಂಬಳ ನೀಡದೇ ದೀರ್ಘಾವಧಿ ದುಡಿತ, ಉತ್ಪಾದನೆಯ ಅವೈಜ್ಞಾನಿಕ ಮಾನದಂಡ, ಲೈಂಗಿಕ ಶೋಷಣೆ, ಲಿಂಗಭೇದ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸದೇ ಇರುವುದು ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಕಾರ್ಮಿಕರು ಸಮಿತಿಯ ಗಮನ ಸೆಳೆದರು.

ಸಮಸ್ಯೆಗಳನ್ನು ಆಲಿಸಿದ ಸಮಿತಿಯ ಸದಸ್ಯರು, ಗಾರ್ಮೆಂಟ್ ಬ್ರಾಂಡ್ಸ್, ವಿತರಕರು ಹಾಗೂ ಕಾರ್ಮಿಕರ ಸಂಘಟನೆಗಳು ಹಾಗೂ ಸರ್ಕಾರದ ಅಧಿಕಾರಿಗಳಿಗೆ ಕೆಲವು ಶಿಫಾರಸುಗಳನ್ನು ಮಾಡಿದರು. ಮಾನವ ಹಕ್ಕಿನ ಭಾಗವಾಗಿ ಕಾರ್ಮಿಕರಿಗೆ ಜೀವನ ಭತ್ಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.

ಜೀವನ ಭತ್ಯೆಯೊಂದಿಗೆ ಗುಣಮಟ್ಟದ ಆಹಾರ ಭದ್ರತೆ ಹಾಗೂ ಗೌರವಯುತ ಜೀವನ, ವೈದ್ಯಕೀಯ ವೆಚ್ಚ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಸಮರ್ಪಕ ವಿಶ್ರಾಂತಿ ಸೇರಿದಂತೆ ಇತರೆ ಪ್ರಮುಖ ಸೌಲಭ್ಯಗಳನ್ನು ಅಗತ್ಯವಾಗಿ ಒದಗಿಸಬೇಕು. ಕಾಲಕ್ಕೆ ಅನುಗುಣವಾಗಿ ಜೀವನ ಭತ್ಯೆಯನ್ನು ಹೆಚ್ಚಿಸಬೇಕು. ಕಾರ್ಮಿಕ ಸಚಿವಾಲಯವು ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ದಿಸೆಯಲ್ಲಿ ಹಣಕಾಸು ನಿಗಮ ಹಾಗೂ ಯೋಜನಾ ಆಯೋಗ ಸಹಕಾರ ನೀಡಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.