ADVERTISEMENT

ಸಚಿವ ಎಚ್‌.ಕೆ.ಪಾಟೀಲ ಜಾಲತಾಣ ಹ್ಯಾಕ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 19:16 IST
Last Updated 22 ಏಪ್ರಿಲ್ 2018, 19:16 IST

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಅವರ ಜಾಲತಾಣವನ್ನು ಅ‍ಪರಿಚಿತರು ಹ್ಯಾಕ್‌ ಮಾಡಿದ್ದಾರೆ. ಅದರಲ್ಲಿ, ‘ಇಂಡಿಯನ್‌ ಡಾಗ್ಸ್‌ ಗೋ ಬ್ಯಾಕ್‌’ ಎಂಬ ಬರಹ ಪ್ರಕಟಿಸಿದ್ದಾರೆ.

ಈ ಸಂಬಂಧ ಸಚಿವ ಪಾಟೀಲ ನಗರದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪೊಲೀಸರು, ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ನನ್ನ ರಾಜಕೀಯ ಬದುಕು ಹಾಗೂ ಸಚಿವನಾಗಿ ಮಾಡಿದ ಕೆಲಸಗಳ ಮಾಹಿತಿಯನ್ನು www.hkpatil.com ಜಾಲತಾಣದಲ್ಲಿ ಅಳವಡಿಸಿದ್ದೇನೆ. ಏ. 21ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಜಾಲತಾಣವನ್ನು ಯಾರೋ ಹ್ಯಾಕ್‌ ಮಾಡಿದ್ದಾರೆ’ ಎಂದು ಸಚಿವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

'ಹ್ಯಾಕರ್‌ಗಳು  ರಾಷ್ಟ್ರವಿರೋಧಿ ಅಂಶಗಳನ್ನು ಜಾಲತಾಣದಲ್ಲಿ ಬರೆದಿದ್ದಾರೆ. ಇದರಿಂದ ನನ್ನ ಜಾಲತಾಣದ ವಿಶ್ವಾಸಾರ್ಹತೆ ಹಾಗೂ ಗೋಪ್ಯತೆಗೆ ಧಕ್ಕೆ ಆಗಿದೆ. ನನ್ನ ಘನತೆಗೆ ಕಳಂಕ ತರುವ ಉದ್ದೇಶದಿಂದ ಯಾರೋ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಬಂಧಿಸಬೇಕು’ ಎಂದು ಹೇಳಿದ್ದಾರೆ.

ಪೊಲೀಸರು, ‘ಸಚಿವರು ಭಾನುವಾರ ಸಂಜೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.