ADVERTISEMENT

ಸರ್ಕಾರದ ನಿಲುವು ತಿಳಿಸಲು ಸೂಚನೆ

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ತನಿಖೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ, ಸಿಐಡಿ ಅಥವಾ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸುವ ಸಂಬಂಧ ನಿಲುವು ತಿಳಿಸುವಂತೆ ಸರ್ಕಾರಕ್ಕೆ, ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

ಅವರ ಕೊಲೆ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ನ್ಯಾಯಪೀಠದ ಎದುರು ವಾದ ಮಂಡಿಸಿದ ಪ್ರಕರಣದ ಅಮಿಕಸ್ ಕ್ಯುರಿ (ನ್ಯಾಯಾಲಯದ ಸಹಾಯಕ) ಅಸ್ಮತ್ ಪಾಷಾ, `ಇದು ಕೇವಲ ಹಣಕ್ಕಾಗಿ ನಡೆದ ಕೊಲೆಯಲ್ಲ. ಹತ್ಯೆಯಾಗುವ ಮುನ್ನ ಲಿಂಗರಾಜು ಅವರು ರಕ್ಷಣೆ ಕೋರಿ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಪೊಲೀಸರು ಸರಿಯಾಗಿ ನಡೆಸಿಲ್ಲ' ಎಂದರು.

`ಇದು ಗಂಭೀರ ಪ್ರಕರಣ' ಎಂದು ಹೇಳಿದ ನ್ಯಾಯಪೀಠ, ಇದರ ತನಿಖೆಯನ್ನು ಸಿಬಿಐ, ಸಿಐಡಿ ಅಥವಾ ಎಸ್‌ಐಟಿಯಿಂದ ನಡೆಸುವ ಕುರಿತು ಅಭಿಪ್ರಾಯ ತಿಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ವರದಿ ಸಲ್ಲಿಸಲು ಸೂಚನೆ: ನಗರದ ಎಂಎಲ್‌ಎ ಬಡಾವಣೆಗೆ ರಸ್ತೆ ಸಂಪರ್ಕ ಕಲ್ಪಿಸಲು ಕೈಗೊಂಡಿರುವ ಕ್ರಮಗಳು ಮತ್ತು ಅಲ್ಲಿ ನಡೆದಿರುವ ಒತ್ತುವರಿಯನ್ನು ತೆರವು ಮಾಡಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಬುಧವಾರ ನಿರ್ದೇಶನ ನೀಡಿದೆ.

ಭೂಮಿ ಒತ್ತುವರಿ ಆಗಿರುವ ಕುರಿತು ಶಕುಂತಲಾ ಚೌಗಲೆ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಖಾಸಗಿ ಸಂಸ್ಥೆಯೊಂದು, ಅಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಫ್ಲಾಟ್‌ಗಳನ್ನು ಮಾರಾಟ ಮಾಡಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದರಿಂದ ಕೋಪಗೊಂಡ ನ್ಯಾಯಪೀಠ, `ಅವರಿಗೆ ಅಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಅನುಮತಿ ನೀಡಿದ್ದು ಯಾರು? ಅತಿಕ್ರಮಣ ತೆರವುಗೊಳಿಸಲು ಯಾವ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿ' ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.