ADVERTISEMENT

`ಸರ್ಕಾರದ ಭವಿಷ್ಯ ಜ. 4ಕ್ಕೆ ನಿರ್ಧಾರ'

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 20:05 IST
Last Updated 26 ಡಿಸೆಂಬರ್ 2012, 20:05 IST

ಬೆಂಗಳೂರು: ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದು ಟೀಕಿಸಿದ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ಅಳಿವು - ಉಳಿವಿನ ಬಗ್ಗೆ ಜನವರಿ 4ರಂದು ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

`ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ನನ್ನ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆಗಳ ಅನುಷ್ಠಾನಕ್ಕೆ ಹಣ ಬಿಡುಗಡೆ ಮಾಡಿಲ್ಲ' ಎಂದು ಆರೋಪಿಸಿ ಬುಧವಾರ ಹಮ್ಮಿಕೊಂಡಿದ್ದ `ವಿಧಾನಸೌಧ ಚಲೊ' ಅಂಗವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

`ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯತ್ತ ಗಮನಹರಿಸಿವೆ. ಬಹುಮತ ಇಲ್ಲದಿದ್ದರೂ ಇನ್ನೂ 3-4 ತಿಂಗಳು ಅಧಿಕಾರದಲ್ಲಿ ಮುಂದುವರಿಯುವ ಹಂಬಲ ಬಿಜೆಪಿಗೆ ಇದೆ. ಪ್ರತಿಪಕ್ಷಗಳು ತಮ್ಮ ಕರ್ತವ್ಯ ಮರೆತಿವೆ. ಸರ್ಕಾರದ ಕಿವಿ ಹಿಂಡುವ ಉದ್ದೇಶದಿಂದ ಕೆಜೆಪಿ ವಿಧಾನಸೌಧ ಚಲೊ ಹಮ್ಮಿಕೊಂಡಿದೆ' ಎಂದರು.

`ಜ.4ರಂದು ನಡೆಯುವ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿ, ಜನರ ವಿಶ್ವಾಸ ಕಳೆದುಕೊಂಡಿರುವ ಸರ್ಕಾರಕ್ಕೆ ಬೆಂಬಲ ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ ತೀರ್ಮಾನಿಸುತ್ತೇವೆ' ಎಂದು ತಿಳಿಸಿದರು.

ವೃದ್ಧಾಪ್ಯ, ವಿಧವಾ, ಅಂಗವಿಕಲರ ವೇತನ ಪಾವತಿಯಾಗಿಲ್ಲ. ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾಸುರಕ್ಷಾ, ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹಧನ ನೀಡುತ್ತಿಲ್ಲ. ಸುಮಾರು ಹತ್ತು ಲಕ್ಷ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಶೀಲನೆ ಹೆಸರಿನಲ್ಲಿ ಫಲಾನುಭವಿಗಳನ್ನು ಸೌಲಭ್ಯವಂಚಿತರನ್ನಾಗಿ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಮೂರು ತಿಂಗಳಿಂದ ಪ್ರೋತ್ಸಾಹಧನ ಪಾವತಿಯಾಗಿಲ್ಲ. 90 ಕೋಟಿ ರೂಪಾಯಿ ಹಣ ಬಾಕಿ ಇದೆ. ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಂಡ್, ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳಿಗೆ ಹಣ ನೀಡಿಲ್ಲ. ವಾರದಲ್ಲಿ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

`ಯಡಿಯೂರಪ್ಪ ಅಧಿಕಾರದಿಂದ ಇಳಿಯುತ್ತಿದ್ದಂತೆ ಅವರು ಜಾರಿಗೊಳಿಸಿದ ಯೋಜನೆಗಳೂ ಹೋದವು ಎಂದು ಬಿಂಬಿಸುವ ಪ್ರಯತ್ನ 14 ತಿಂಗಳಿಂದ ನಡೆದಿದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ನನ್ನ ಮೇಲಿನ ದ್ವೇಷದಿಂದ ಜನಸಾಮಾನ್ಯರಿಗೆ ಪ್ರಯೋಜನವಾಗುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಇರುವುದು ಸರಿಯಲ್ಲ' ಎಂದರು.

ಪ್ರತಿಭಟನಾ ಸಭೆಯ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರನ್ನು ಏಟ್ರಿಯಾ ಹೋಟೆಲ್ ಬಳಿ ಪೊಲೀಸರು ತಡೆದರು. ಹೀಗಾಗಿ ಅಲ್ಲಿಯೇ ಸ್ವಲ್ಪ ಹೊತ್ತು ಧರಣಿ ನಡೆಸಿದರು. ನಂತರ ಯಡಿಯೂರಪ್ಪ, ಎಂ.ಡಿ.ಲಕ್ಷ್ಮಿನಾರಾಯಣ, ಕೆ.ಎಚ್.ಶ್ರೀನಿವಾಸ್ ಸೇರಿದಂತೆ ಒಟ್ಟು 286 ಜನರನ್ನು ಬಂಧಿಸಿದ ಪೊಲೀಸರು ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.