ADVERTISEMENT

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ಕೃಷ್ಣರಾಜಪುರ: `ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನಹರಿಸಬೇಕು~ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ವಿ.ಪಿ.ನಿರಂಜನ ಆರಾಧ್ಯ ಅವರು ತಿಳಿಸಿದರು.

ಚನ್ನಸಂದ್ರ ವರ್ತುಲ ರಸ್ತೆ, ಎ.ಎಸ್.ಆರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

`ಯದ್ವಾತದ್ವಾ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದರಿಂದ ಹಾಗೂ ಖಾಸಗಿ ಮತ್ತು ಕೇಂದ್ರಿಯ ಶಾಲೆಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದೇ ಇರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಉಂಟಾಗಿದೆ~ ಎಂದು ಅವರು ವಿಷಾದಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, `ರಾಷ್ಟ್ರದ ಭದ್ರ ಬುನಾದಿಗೆ ಪ್ರಾಥಮಿಕ ಹಂತದ ಶಿಕ್ಷಣ ಪೂರಕ ಎಂಬುದನ್ನು ಅರಿತು ಮಕ್ಕಳ ಶ್ರೇಯೋಭಿವೃದ್ಧಿಗೆ ಶಿಕ್ಷಕರು ಗಮನ ಹರಿಸಬೇಕು~ ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರಿಗೆ ಗೌರವ ನಿಧಿ ಅರ್ಪಿಸಿ ಶಾಸಕ ಎನ್.ಎಸ್.ನಂದೀಶ ರೆಡ್ಡಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಇ.ಸಿ.ಹರಿಪ್ರಸಾದ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಸವರಾಜ ಗುರಿಕಾರ್, ಕಾರ್ಯದರ್ಶಿ ವಿ.ಎಂ.ನಾರಾಯಣ ಸ್ವಾಮಿ, ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮರಿಯಪ್ಪ, ಸದಸ್ಯೆ ಶೋಭಾ, ಸಮನ್ವಯ ಅಧಿಕಾರಿ ಎಂ.ಎಸ್.ಕೃಷ್ಣಪ್ಪ, ಬಿಬಿಎಂಪಿ ಸದಸ್ಯ ಎನ್.ವೀರಣ್ಣ, ಆರ್.ಮಂಜುಳಾ ದೇವಿ, ತೇಜಸ್ವಿನಿ ರಾಜು, ಮುಖಂಡ ಬಿ.ಎಸ್.ಗಣೇಶ್ ರೆಡ್ಡಿ, ಶಿವರಾಜ್, ಪಾಪಣ್ಣ, ಸಂಘದ ಪದಾಧಿಕಾರಿಗಳಾದ ಲಕ್ಷ್ಮೆಕಾಂತಯ್ಯ, ಮಹದೇವೇಗೌಡ, ಎನ್.ವೆಂಕಟಪ್ಪ, ಮುನಿರಾಜು ಮತ್ತಿತರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.