ಬೆಂಗಳೂರು: `ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಿ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರತಿ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸಲು ಸಜ್ಜಾಗಿರಬೇಕು' ಎಂದು ಖ್ಯಾತ ಚೆಸ್ ಸ್ಪರ್ಧಿ ವಿಶ್ವನಾಥನ್ ಆನಂದ್ ಕಿವಿಮಾತು ಹೇಳಿದರು.
ಸ್ಯಾಪ್ ಲ್ಯಾಬ್ಸ್ ಆಫ್ ಇಂಡಿಯಾ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಸಂಬಂಧಿ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲು ವೈಟ್‌ಫಿಲ್ಡ್ ಕೈಗಾರಿಕಾ ಪ್ರದೇಶದ ಕರ್ನಾಟಕ ಟ್ರೇಡ್ ಪ್ರಮೋಷನ್ ಸೆಂಟರ್‌ನಲ್ಲಿ ಸೋಮವಾರ ಆಯೋಜಿಸಿದ್ದ `ಸ್ಯಾಪ್ ಟೆಕ್ನಿವರ್ಸಿಟಿ-2012' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಚೆಸ್‌ನಲ್ಲಿ ಈಗ ಕಂಪ್ಯೂಟರ್ ಪ್ರಮುಖ ಪಾತ್ರ ವಹಿಸುತ್ತಿದೆ. ಚೆಸ್‌ನಲ್ಲಿ ಯೋಜನೆ ರೂಪಿಸುವುದಕ್ಕಿಂತ ಎದುರಾಳಿಯ ನಡೆಗೆ ತಕ್ಕಂತೆ ವೇಗವಾಗಿ ಆಡುವುದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಭಾರತದ ಗ್ರ್ಯಾಂಡ್ ಮಾಸ್ಟರ್ ಅಭಿಪ್ರಾಯಪಟ್ಟರು.
ಗೂಗಲ್ ಇಂಡಿಯಾ ಔಟ್‌ರೀಚ್ ಪ್ರೊಗ್ರಾನ ಮುಖ್ಯಸ್ಥ ಸುನೀಲ್ ರಾವ್ ಮಾತನಾಡಿ, `ಇಂಟರ್‌ನೆಟ್ ಬಳಕೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ ಮೂರನೇ ಸ್ಥಾನ. ಮೊಬೈಲ್ ಬಳಸುವವರಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು. ದೇಶದಲ್ಲಿ 120 ದಶಲಕ್ಷ ಇಂಟರ್‌ನೆಟ್ ಬಳಕೆದಾರರಿದ್ದು, ಇದರಲ್ಲಿ 70 ದಶಲಕ್ಷ ಮಂದಿ ಮೊಬೈಲ್ ಮೂಲಕವೇ ಇಂಟರ್‌ನೆಟ್ ಬಳಸುತ್ತಿದ್ದಾರೆ' ಎಂದರು.
ಕ್ಯಾಪ್‌ಗೆಮಿನಿ ಇಂಡಿಯಾದ ನೇಮಕಾತಿ ವಿಭಾಗದ ಉಪಾಧ್ಯಕ್ಷ ಶ್ರೀನಿವಾಸ ರಾವ್, `ವಿದ್ಯಾರ್ಥಿಗಳಿಂದ ಉದ್ಯೋಗಿಗಳವರೆಗೂ ಕಲಿಕೆಯ ಹಸಿವೆ ಇರಬೇಕು. ಸಂಸ್ಥೆಗಳು ಸಿಬ್ಬಂದಿಯಿಂದ ಜ್ಞಾನದಾಹವನ್ನು ನಿರೀಕ್ಷೆ ಮಾಡುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ಕಾಲಕಾಲಕ್ಕೆ ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.
ಸ್ಯಾಪ್ ನೇಮಕಾತಿ ವಿಭಾಗದ ಜಾಗತಿಕ ಮುಖ್ಯಸ್ಥ ಅನಿಲ್ ವಾರಿಯರ್, `ಹತ್ತಾರು ವರ್ಷ ಅನುಭವ ಗಳಿಸಿದ ಬಳಿಕವೂ ಉದ್ಯೋಗಿಗಳಲ್ಲಿ ವಿಷಯಪರಿಣಿತಿ ಕಂಡುಬರುತ್ತಿಲ್ಲ. ಇದು ಉದ್ಯಮಗಳಿಗೆ ಎದುರಾಗಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಕಲಿಕೆ ನಿರಂತರ ಪ್ರಕ್ರಿಯೆಯಾಗಬೇಕು. ವಿದ್ಯಾರ್ಥಿಗಳು ಇಷ್ಟದ ವಿಷಯಗಳಲ್ಲಿ ವಿಷಯಪರಿಣಿತಿ ಗಳಿಸಲು ಮೊದಲ ಆದ್ಯತೆ ನೀಡಬೇಕು' ಎಂದು ಸಲಹೆ ನೀಡಿದರು.
ಸ್ಯಾಪ್ ಉಪಾಧ್ಯಕ್ಷ (ಮಾರುಕಟ್ಟೆ ಹಾಗೂ ಸಂವಹನ ವಿಭಾಗ) ಸುಂದರ್ ಮದಕ್ಷಿರ ಮಾತನಾಡಿ, `ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಿದ್ಧತೆಯನ್ನು ಹೆಚ್ಚಿಸಲು ಸ್ಯಾಪ್ ಗಮನ ಹರಿಸುತ್ತಿದೆ. ಯುವಜನರಿಗೆ ಸ್ವಉದ್ಯೋಗಕ್ಕೆ ಪ್ರೇರಣೆ ನೀಡಲು, ಉದ್ಯಮ ಹಾಗೂ ಶಿಕ್ಷಣ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದರು.
`ವಿದ್ಯಾರ್ಥಿಗಳು ತಂತ್ರಜ್ಞಾನದ ಶೋಧಗಳನ್ನು ಕಲಿಯಲು ತಯಾರಿದ್ದು, ತ್ವರಿತಗತಿಯಲ್ಲಿ ಕೌಶಲವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಸ್ಯಾಪ್ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿದರು.
ಏಳು ರಾಜ್ಯಗಳ 200ಕ್ಕೂ ಅಧಿಕ ಕಾಲೇಜುಗಳ 5,200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿವಿಧ ತಂತ್ರಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.