ADVERTISEMENT

ಸಹಾಯಧನ: ಭವಿಷ್ಯ ಕೋರ್ಟ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬೆಂಗಳೂರು: 2009-10ನೇ ಸಾಲಿನ ಉತ್ತಮ ಗುಣಮಟ್ಟದ ಕನ್ನಡ ಚಿತ್ರಗಳಿಗೆ ಬಿಡುಗಡೆ ಮಾಡಲಾದ ಸಹಾಯಧನದ (ಸಬ್ಸಿಡಿ) `ಭವಿಷ್ಯ~ವನ್ನು ಹೈಕೋರ್ಟ್ ನಿರ್ಧರಿಸಲಿದೆ.

- ಕಾರಣ, ನಿಯಮಗಳನ್ನು ಗಾಳಿಗೆ ತೂರಿ ಸಹಾಯಧನಕ್ಕೆ ಚಿತ್ರಗಳ ಆಯ್ಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ `ಸಹಾಯಧನದ ಮುಂದಿನ ಪ್ರಕ್ರಿಯೆ ಕೋರ್ಟ್ ತೀರ್ಪಿಗೆ ಬದ್ಧವಾಗಲಿದೆ~ ಎಂದು ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಆದೇಶಿಸಿದ್ದಾರೆ.

ಚಿತ್ರಗಳ ಆಯ್ಕೆ ಸಮಿತಿ ಸದಸ್ಯರು ಭಾರಿ ಪ್ರಮಾಣದ ಲಂಚ ಪಡೆಯುವ ಮೂಲಕ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಹಾಯಧನಕ್ಕೆ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ ಎಂದು ದೂರಿ ರಾಮು ಕ್ರಿಯೇಷನ್ಸ್, ಎಂ.ಎಸ್.ತುಲಜಾ ಭವಾನಿ ಕ್ರಿಯೇಷನ್ಸ್ ಸೇರಿದಂತೆ ಹಲವು ನಿರ್ಮಾಪಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಘಳು ನಡೆಸುತ್ತಿದ್ದಾರೆ.

ಈ ಆದೇಶದಿಂದಾಗಿ ಸಹಾಯಧನಕ್ಕಾಗಿ ಎಸ್.ಶಿವರಾಂ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ಆಯ್ಕೆಗೊಂಡ 50 ಚಲನಚಿತ್ರಗಳ ಭವಿಷ್ಯ ಈಗ ನ್ಯಾಯಾಲಯದ ಕೈಯಲ್ಲಿದೆ.

ಆರೋಪವೇನು?: ಕರ್ನಾಟಕದಲ್ಲಿಯೇ ಚಿತ್ರೀಕರಣಗೊಂಡಿರುವ ಯಾವುದೇ ಭಾಷೆಯ ಚಿತ್ರ ಸಹಾಯಧನಕ್ಕೆ ಅರ್ಹವಾಗಿದೆ. ಆದರೆ ನಿಯಮದ  ಪ್ರಕಾರ ಇದನ್ನು ಪಡೆಯಲು ಒಳ್ಳೆಯ ಗುಣಮಟ್ಟವನ್ನು ಚಿತ್ರ ಹೊಂದಿರಬೇಕು.  ಕ್ರೌರ್ಯ, ಲೈಂಗಿಕತೆಯನ್ನು ವಿಜೃಂಭಿಸಬಾರದು. ಡಬ್ಬಿಂಗ್ ಅಥವಾ ರಿಮೇಕ್ ಆಗಿರಬಾರದು... ಹೀಗೆ ಹತ್ತು ಹಲವು ಷರತ್ತುಗಳು ಇವೆ.

ಚಿತ್ರಗಳ ಯೋಗ್ಯತೆಗೆ ತಕ್ಕಂತೆ 15ರಿಂದ 25 ಲಕ್ಷ ರೂಪಾಯಿಗಳ ಸಹಾಯಧನ ನೀಡಲಾಗುವುದು. ಆದರೆ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಸುರೇಶ್ ಮಂಗಳೂರು ಅವರು ನಿರ್ಮಾಪಕರಿಂದ ರೂ 5 ಲಕ್ಷದವರೆಗೆ ಲಂಚ ಪಡೆದು ಚಿತ್ರಗಳನ್ನು ಸಹಾಯಧನಕ್ಕೆ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಕ್ರಿಮಿನಲ್ ಪ್ರಕರಣ ಕೂಡ ದಾಖಲು ಆಗಿದೆ.
 
ಮಾಧ್ಯಮಗಳಲ್ಲಿ ಕೂಡ ಇದು ಭಾರೀ ಸುದ್ದಿ ಆಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆಯ್ಕೆಯಾದ ಕೆಲವು ಚಿತ್ರಗಳಲ್ಲಿ ಆಯ್ಕೆ ಸಮಿತಿಯ ಸದಸ್ಯರೂ ಆಗಿರುವ ಸುರೇಶ್ ಮಂಗಳೂರು ಹಾಗೂ ರಾಮಕೃಷ್ಣ ಅವರೇ ನಟಿಸಿದ್ದಾರೆ. ಈ ರೀತಿ ಆಯ್ಕೆ ಮಾಡಿರುವುದೂ ನಿಯಮಬಾಹಿರ ಎಂದಿರುವ ಅರ್ಜಿದಾರರು ಈ ಚಿತ್ರಗಳ ಆಯ್ಕೆ ಅನೂರ್ಜಿತಗೊಳಿಸುವಂತೆ ಕೋರಿದ್ದಾರೆ. ಮರು ಆಯ್ಕೆ ಸಮಿತಿಯನ್ನು ರಚಿಸುವಂತೆ ಆದೇಶಿಸಲೂ ಅವರು ಕೋರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.