ADVERTISEMENT

ಸಾಕಾನೆ ಜತೆ ಕಾಡಾನೆ

ಬನ್ನೇರುಘಟ್ಟ ಉದ್ಯಾನದಲ್ಲಿ ಮದಕ್ಕೆ ಬಂದ ಗಜಗಳು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 20:06 IST
Last Updated 18 ಆಗಸ್ಟ್ 2016, 20:06 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಸಾಕಾನೆಗಳ ಜತೆ ಸೇರಿಕೊಂಡಿರುವ ಕಾಡಾನೆ (ಮಧ್ಯದಲ್ಲಿರುವುದು) –ಪ್ರಜಾವಾಣಿ ಚಿತ್ರ
ಬನ್ನೇರುಘಟ್ಟ ಜೈವಿಕ ಉದ್ಯಾನದ ಸಾಕಾನೆಗಳ ಜತೆ ಸೇರಿಕೊಂಡಿರುವ ಕಾಡಾನೆ (ಮಧ್ಯದಲ್ಲಿರುವುದು) –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ಸಾಕಾನೆಗಳ ಜತೆಯಲ್ಲಿ ಎರಡು ಕಾಡಾನೆಗಳೂ ಸೇರಿಕೊಂಡಿವೆ.

‘ಜೈವಿಕ ಉದ್ಯಾನದ ಸಾಕಾನೆಗಳನ್ನು ಉದ್ಯಾನ ಹೊರಗಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಾಡಿನಲ್ಲಿ ಮೇಯಲು ಬಿಡುತ್ತೇವೆ. ಬಿದಿರುಗಳನ್ನು ತಿಂದು ಅವು ಮತ್ತೆ ಜೈವಿಕ ಉದ್ಯಾನಕ್ಕೆ ಮರಳುತ್ತವೆ. ಈ ಸಂದರ್ಭದಲ್ಲಿ ಗಂಡು ಕಾಡಾನೆಗಳು ಬಂದು ಗುಂಪಿನೊಂದಿಗೆ ಸೇರಿಕೊಳ್ಳುತ್ತವೆ. ಈ ಬಾರಿ ಎರಡು ಆನೆಗಳು 3–4 ದಿನಗಳಿಂದ ಸಾಕಾನೆಗಳ ಗುಂಪಿನಲ್ಲಿ ಕಾಣಿಸಿಕೊಂಡಿವೆ’ ಎಂದು ಮಾವುತ ‘ಪ್ರಜಾವಾಣಿ’ಗೆ ತಿಳಿಸಿದರು.

ಮದಕ್ಕೆ ಬಂದ ಆನೆಗಳು: ‘ಆನೆಗಳಿಗೆ ಮಳೆಗಾಲ ಸಂತಾನೋತ್ಪತ್ತಿಯ ಸಮಯ. ಈ ಸಮಯದಲ್ಲಿ ಬಿದಿರುಗಳು ಚಿಗುರುವುದರಿಂದ ಪುಷ್ಕಳ ಆಹಾರವೂ  ಲಭ್ಯ. ಸಾಮಾನ್ಯವಾಗಿ ಮದಕ್ಕೆ ಬಂದ ಗಂಡಾನೆಗಳು ಹೆಣ್ಣಾನೆಗಳನ್ನು ಹುಡುಕುತ್ತಿರುತ್ತವೆ.

ಜೈವಿಕ ಉದ್ಯಾನದಲ್ಲಿ ಹೆಣ್ಣಾನೆಗಳಿರುವ ಸುಳಿವು ಪಡೆದು ಪ್ರತಿ ವರ್ಷವೂ ಕಾಡಿನ ಗಂಡಾನೆಗಳು ಇಲ್ಲಿಗೆ ಬಂದು ಸೇರಿಕೊಳ್ಳುತ್ತವೆ. ನಾಲ್ಕೈದು ದಿನ ಇಲ್ಲಿನ ಹೆಣ್ಣಾನೆಗಳ ಜೊತೆ ಕೂಡಿ ನಂತರ ಕಾಡಿಗೆ ಮರಳುತ್ತವೆ’ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಂಡಾನೆಗೆ ಮದ ಬಂದಾಗ ಕಿವಿಯ ಬಳಿ ಸ್ರಾವ ಇರುತ್ತದೆ. ಇಂತಹ  ಆನೆಗಳು ಒಂಟಿಯಾಗಿದ್ದರೆ ಅಪಾಯಕಾರಿ. ಹೆಚ್ಚಾಗಿ ದಾಂಧಲೆ ನಡೆಸುವುದು ಇಂತಹ ಆನೆಗಳೇ. ಇವು ಹೆಣ್ಣಾನೆಗಳ ಗುಂಪಿನಲ್ಲಿದ್ದರೆ  ಅಪಾಯ ಕಡಿಮೆ. ಅವುಗಳ ಹತ್ತಿರ ಸುಳಿಯದಿರುವುದು ಒಳ್ಳೆಯದು’ ಎಂದು ಅವರು ತಿಳಿಸಿದರು.

‘ಕಳೆದ ವರ್ಷ ಭಾರಿ ಗಾತ್ರದ  ಮದಭರಿತ ಗಂಡಾನೆಯೊಂದು ಇಲ್ಲಿಗೆ ಬಂದು ಸೇರಿಕೊಂಡಿತ್ತು. ಅದಕ್ಕೆ ರಂಗ ಎಂದು ಹೆಸರಿಟ್ಟಿದ್ದೇವೆ. ಅದು ಸುಮಾರು ಒಂದು ತಿಂಗಳು  ಇಲ್ಲೇ ಉಳಿದುಕೊಂಡು ಬಳಿಕ ಕಾಡಿಗೆ ಮರಳಿತ್ತು’ ಎಂದು ಅರಣ್ಯರಕ್ಷಕ ಸಿಬ್ಬಂದಿಯೊಬ್ಬರು ಮೆಲುಕು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT