ADVERTISEMENT

ಸಾಲಮನ್ನಾ ಮಾಡಲು ರೈತರ ಒತ್ತಾಯ

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಯತ್ನ ವಿಫಲ: ಸಚಿವರಿಗೆ ಮನವಿ ಸಲ್ಲಿಕೆ

ಪಿಟಿಐ
Published 25 ಮೇ 2017, 19:45 IST
Last Updated 25 ಮೇ 2017, 19:45 IST
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಮಾತನಾಡಿದರು
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಮಾತನಾಡಿದರು   

ಬೆಂಗಳೂರು: ರೈತರ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಒಂಬತ್ತು ದಿನದಿಂದ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ಸದಸ್ಯರು, ಗುರುವಾರ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು            ಯತ್ನಿಸಿದರು.

ಆನಂದರಾವ್ ವೃತ್ತದಿಂದ ಕುಮಾರ ಕೃಪಾ ರಸ್ತೆಯ ಮುಖ್ಯಮಂತ್ರಿ ಅವರ ಮನೆ ಕಡೆಗೆ ಹೊರಟಿದ್ದ ಪ್ರತಿಭಟನಾ ಕಾರರ ಮೆರವಣಿಗೆಯನ್ನು ಮೌರ್ಯ ವೃತ್ತದ ಬಳಿ ತಡೆದ  ಪೊಲೀಸರು, ಮುತ್ತಿಗೆ ಯತ್ನ ವಿಫಲಗೊಳಿಸಿದರು. ಅದೇ ಸ್ಥಳದಲ್ಲೇ ಪ್ರತಿಭಟನೆ ಮುಂದುವರಿಯಿತು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತ ನಾಡಿ, ‘ಸರ್ಕಾರವು ಸಾಲಮನ್ನಾ ಮಾಡ ದಿದ್ದರೆ ಮುಂಬರುವ ಚುನಾವಣೆ ವೇಳೆ ಶಾಸಕರು ಗ್ರಾಮಕ್ಕೆ ಬಾರದಂತೆ  ರೈತರು ತಡೆಯಲಿದ್ದಾರೆ’ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ₹32,000 ಕೋಟಿ ಮೌಲ್ಯದ ಬೆಳೆ ಹಾನಿ ಆಗಿದೆ. ಕೇಂದ್ರ ಸರ್ಕಾರವು ಕೇವಲ ₹2,000 ಕೋಟಿ  ಪರಿಹಾರ ಒದಗಿಸಿದೆ. ಇನ್ನುಳಿದ ₹30,000 ಕೋಟಿ ಬೆಳೆ ಹಾನಿಗೆ ಪರಿಹಾರ ನೀಡುವವರು ಯಾರು’ ಎಂದು ಪ್ರಶ್ನಿಸಿದರು. ‘ಸರ್ಕಾರದ ಬೆಳೆಹಾನಿ ಪರಿಹಾರ, ಹಾಲಿನ ಸಹಾಯಧನ, ಬೆಳೆ ವಿಮೆ, ವಿಧವಾ ವೇತನವನ್ನು ಬ್ಯಾಂಕ್‌ನವರು ಸಾಲದ ಖಾತೆಗೆ ಜಮೆ ಮಾಡಿಕೊಳ್ಳು ತ್ತಿದ್ದಾರೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ‘ಬಲವಂತದ ಸಾಲ ವಸೂಲಿಯನ್ನು ಬ್ಯಾಂಕ್‌ನವರು ನಿಲ್ಲಿಸಬೇಕು. ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಚಿವರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಸಚಿವರಾದ ಟಿ.ಬಿ. ಜಯಚಂದ್ರ ಹಾಗೂ ಕೆ.ಆರ್‌. ರಮೇಶ್‌ಕುಮಾರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಜಯಚಂದ್ರ ಮಾತನಾಡಿ, ‘ಸಾಲಮನ್ನಾ ಸೇರಿದಂತೆ ಎಲ್ಲ ಬೇಡಿಕೆ ಈಡೇರಿಕೆ ಸಂಬಂಧ ರೈತ ಮುಖಂಡರ ಸಭೆ ನಡೆಸುತ್ತೇವೆ.  ರೈತರ ಮೇಲಿನ ಎಲ್ಲ ಪ್ರಕರಣ ಹಿಂಪಡೆಯಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.