ADVERTISEMENT

ಸಿಎಂ ವಿರುದ್ಧ ಖಾಸಗಿ ಮೊಕದ್ದಮೆ: ತಡೆ ಇಲ್ಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 20:15 IST
Last Updated 26 ಫೆಬ್ರುವರಿ 2011, 20:15 IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ಹೂಡಿರುವ ಖಾಸಗಿ ಮೊಕದ್ದಮೆಯ ವಿಚಾರಣೆಗೆ ತಡೆ ನೀಡುವಂತೆ ಕೋರಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಶನಿವಾರ ವಜಾ ಮಾಡಿದೆ. ಸೋಮವಾರವೇ ಅರ್ಜಿದಾರರ ಹೇಳಿಕೆ ದಾಖಲಿಸಲು ದಿನಾಂಕ ನಿಗದಿ ಮಾಡಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.

ಖಾಸಗಿ ಮೊಕದ್ದಮೆಗಳಲ್ಲಿ ಮೂರನೇ ಆರೋಪಿಯೂ ಆಗಿರುವ ಯಡಿಯೂರಪ್ಪ ಅವರ ಅಳಿಯ ಆರ್.ಎನ್.ಸೋಹನ್‌ಕುಮಾರ್, ಈ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಆರೋಪಿಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಕೋರಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆ ತಡೆ ಕೋರಿ ಆರೋಪಿಗಳ ಪಟ್ಟಿಯಲ್ಲಿರುವ ಎನ್.ಅಕ್ಕಮಹಾದೇವಿ ಅವರೂ ಅರ್ಜಿ ಸಲ್ಲಿಸಿದ್ದರು.

ಆರೋಪಿಗಳಿಗೆ ಆರಂಭದಲ್ಲೇ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಶನಿವಾರ ಆದೇಶ ಪ್ರಕಟಿಸಿದ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ ನಗರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ, ಸೋಹನ್‌ಕುಮಾರ್ ಮತ್ತು ಅಕ್ಕಮಹಾದೇವಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನೂ ವಜಾ ಮಾಡಿದರು.

ವಾದ ಆಲಿಸುವುದಿಲ್ಲ: ನಿಗದಿಯಂತೆ ಮಧ್ಯಾಹ್ನ 3 ಗಂಟೆಗೆ ಈ ಪ್ರಕರಣದ ಆದೇಶ ಪ್ರಕಟಿಸಿದ ನ್ಯಾಯಾಧೀಶರು, ಖಾಸಗಿ ಮೊಕದ್ದಮೆಗಳ ವಿಚಾರಣೆಗೆ ತಡೆ ಕೋರಿ ಮತ್ತು ಕುಮಾರಸ್ವಾಮಿ ಅವರನ್ನು ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸಬೇಕೆಂಬ ಬೇಡಿಕೆಯುಳ್ಳ ಎಲ್ಲ ಅರ್ಜಿಗಳನ್ನೂ ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.

ಆದೇಶ ಪ್ರಕಟಿಸಿದ ತಕ್ಷಣವೇ ಖಾಸಗಿ ಮೊಕದ್ದಮೆಗಳ ಸಂಬಂಧ ಮುಂದಿನ ಪ್ರಕ್ರಿಯೆ ಆರಂಭಿಸಲು ನ್ಯಾಯಾಧೀಶರು ಸಿದ್ಧರಾದರು. ಅರ್ಜಿದಾರರು ಮತ್ತು ಸಾಕ್ಷಿಗಳ ಹೇಳಿಕೆ ದಾಖಲು ಮಾಡಲು ದಿನಾಂಕ ನಿಗದಿ ಕುರಿತು ವಕೀಲರ ಜೊತೆ ಚರ್ಚೆ ಆರಂಭಿಸಿದರು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಸೋಹನ್‌ಕುಮಾರ್ ಪರ ವಕೀಲರು, ಈ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಯೋಚನೆ ತಮಗಿದೆ. ಆದ್ದರಿಂದ ಒಂದು ವಾರದ ನಂತರವೇ ಹೇಳಿಕೆ ದಾಖಲು ಮಾಡುವಂತೆ ಕೋರಿದರು. ಆಗ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ನಿಮಗೆ ವಾದ ಮಂಡಿಸಲು ಅವಕಾಶ ಇಲ್ಲ. ನಿಮ್ಮ ವಾದವನ್ನು ನ್ಯಾಯಾಲಯ ಆಲಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಸೂಚನೆ ನೀಡಿದರು.

ಸೋಮವಾರ ಹೇಳಿಕೆ ದಾಖಲು: ಬಳಿಕ ಖಾಸಗಿ ಮೊಕದ್ದಮೆಗಳ ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಸೋಮವಾರ ಅರ್ಜಿದಾರರಾದ ಸಿರಾಜಿನ್ ಬಾಷಾ ಅವರ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.