ADVERTISEMENT

ಸಿಗದ ಬಿಡಿಎ ಮಂಡಳಿ ಸಭೆಯ ಅನುಮೋದನೆ

ಬಿಎಸ್‌ಕೆ 6ನೇ ಹಂತದ ಬಡಾವಣೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:46 IST
Last Updated 3 ಸೆಪ್ಟೆಂಬರ್ 2013, 19:46 IST

ಬೆಂಗಳೂರು: ಬನಶಂಕರಿ ಆರನೇ ಹಂತದ ಬಡಾವಣೆ ನಿರ್ಮಾಣಗೊಂಡು ಹತ್ತು ವರ್ಷ ಕಳೆದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಂಡಳಿ ಸಭೆಯು ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ನೀಡಿಲ್ಲದಿರುವುದು ಬೆಳಕಿಗೆ ಬಂದಿದೆ.

ಬಿಡಿಎ ಮಂಡಳಿ ಸಭೆಯ ಅನುಮೋದನೆ ದೊರಕದೇ ಹೋದರೆ ಬಡಾವಣೆಯಲ್ಲಿರುವ ಮನೆಗಳ ನಿರ್ಮಾಣ ಕಾನೂನು ಬಾಹಿರ ಎಂದಾಗಲಿದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಿದ್ದಾರೆ. `ಮಂಡಳಿ ಸಭೆಯ ಅನುಮೋದನೆ ದೊರಕುವವರೆಗೂ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಬಿಡಿಎಯಿಂದ ಮಾನ್ಯತೆ ಸಿಗುವುದಿಲ್ಲ' ಎಂದು ಬಿಡಿಎ ಆಯುಕ್ತ ಟಿ.ಶ್ಯಾಮ್‌ಭಟ್ ಹೇಳಿದ್ದಾರೆ.

ಮಂಡಳಿ ಸಭೆಯ ಅನುಮೋದನೆ ಇಲ್ಲದ ಮೇಲೆ ಬಿಡಿಎ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದೇಕೆ, ಆಸ್ತಿ ತೆರಿಗೆ ಸಂಗ್ರಹಿಸುತ್ತಿರುವುದೇಕೆ ಎಂಬುದು ಬಡಾವಣೆಯಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಿದವರ ಪ್ರಶ್ನೆಯಾಗಿದೆ.
ಬಡಾವಣೆಯಲ್ಲಿ ಆರು ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿರುವ ಬಿಡಿಎ ಕೆರೆ ಹಾಗೂ ಅರಣ್ಯ ಇಲಾಖೆಯ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪವೂ ಕೇಳಿಬಂದಿದೆ.

`ಗುಬ್ಬಲಾಳದ ಸರ್ವೆ ನಂಬರ್ 8ರಲ್ಲಿದ್ದ ವೆಂಕಟರಾಯನ ಕೆರೆಯನ್ನು ಮುಚ್ಚಿ ಬಿಡಿಎ ಬನಶಂಕರಿ ಆರನೇ ಹಂತ ಬಡಾವಣೆ ನಿರ್ಮಾಣ ಮಾಡಿದೆ. ಕೆರೆಯ ಮೇಲೆ ಮಣ್ಣು ಮುಚ್ಚಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಹಾಗೂ ದಾಖಲೆಗಳಲ್ಲಿ ಗುಬ್ಬಲಾಳ ಸರ್ವೆ ನಂಬರ್ 8ರಲ್ಲಿ ಇನ್ನೂ ಕೆರೆ ಇದೆ ಎಂದೆ ನಮೂದಾಗಿದೆ' ಎನ್ನುತ್ತಾರೆ ಉತ್ತರಹಳ್ಳಿ ನಿವಾಸಿ ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.