ADVERTISEMENT

‘ಸಿನಿಮಾ ತಯಾರಿಕೆಯ ಶಾಸ್ತ್ರೀಯ ಪರಂಪರೆ ಕಣ್ಮರೆ’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:58 IST
Last Updated 24 ಫೆಬ್ರುವರಿ 2018, 19:58 IST
ಹತ್ತನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ದೇಶಕರಾದ ಮಹೇಶ್ ನಾರಾಯಣನ್, ಧಿಮಿತ್ರಿ, ರತ್ನೋತ್ತಮ ಸೇನ್‌ಗುಪ್ತಾ ಹಾಗೂ ಮಾರ್ಕ್ ಬಾಷೆಟ್ ಪಾಲ್ಗೊಂಡಿದ್ದರು.
ಹತ್ತನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ದೇಶಕರಾದ ಮಹೇಶ್ ನಾರಾಯಣನ್, ಧಿಮಿತ್ರಿ, ರತ್ನೋತ್ತಮ ಸೇನ್‌ಗುಪ್ತಾ ಹಾಗೂ ಮಾರ್ಕ್ ಬಾಷೆಟ್ ಪಾಲ್ಗೊಂಡಿದ್ದರು.   

ಬೆಂಗಳೂರು: ಸಿನಿಮಾ ತಯಾರಿಕೆಯಲ್ಲಿದ್ದ ಶಾಸ್ತ್ರೀಯ ಪರಂಪರೆ ಇಂದು ಕಣ್ಮರೆಯಾಗಿದೆ ಎಂದು ‘ಟೇಕ್ ಆಫ್‌’ ಸಿನಿಮಾದ ನಿರ್ದೇಶಕ ಮಹೇಶ್ ನಾರಾಯಣನ್ ವಿಷಾದಿಸಿದರು.

10ನೇ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶನಿವಾರ ಮಾತನಾಡಿದ ಅವರು, ಈ ಹಿಂದೆ ಸಿನಿಮಾವೊಂದನ್ನು ನಿರ್ಮಾಣ ಮಾಡುವಾಗ ಅಲ್ಲಿ ನೂರಾರು ಜನರ ಶ್ರಮವಿರುತ್ತಿತ್ತು. ಅದಕ್ಕೊಂದು ಶಾಸ್ತ್ರೀಯ ಪರಂಪರೆ ಇತ್ತು. ಚಿತ್ರಕತೆ ರಚನೆಯಿಂದ ಸಿನಿಮಾ ಬಿಡುಗಡೆಯ ತನಕ ವಿವಿಧ ಹಂತಗಳಲ್ಲಿ ಚಿತ್ರತಂಡದ ಶ್ರಮವಿರುತ್ತಿತ್ತು. ಬದಲಾದ ಕಾಲಘಟ್ಟ ಹಾಗೂ ಆಧುನಿಕ ತಂತ್ರಜ್ಞಾನದಿಂದ ಇಂದು ಹೆಚ್ಚು ಜನರ ಶ್ರಮವಿಲ್ಲದೇ ಸಿನಿಮಾವೊಂದನ್ನು ಸುಲಭವಾಗಿ ತಯಾರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

‘ಟೇಕ್ ಆಫ್‌’ ಸಿನಿಮಾ ಕುರಿತು ಸಿನಿಮಾ ಪತ್ರಕರ್ತೆ-ನಿರ್ದೇಶಕಿ ರತ್ನೋತ್ತಮ ಸೇನ್‌ಗುಪ್ತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹೇಶ್, 'ಸೌದಿ, ಕುವೈತ್‌ ಸೇರಿದಂತೆ ಕೆಲ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ‘ಟೇಕ್‌ ಆಫ್‌’ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಆದರೆ, ಭಾರತದಲ್ಲಿ ಮಾತ್ರ ಸೆನ್ಸಾರ್ ಆಗಿರುವ ಸಂಪೂರ್ಣ ಸಿನಿಮಾವನ್ನು ಪ್ರದರ್ಶಿಸಲು ಸಾಧ್ಯವಾಗಿದೆ' ಎಂದರು.

ADVERTISEMENT

‘ಟೇಕ್‌ಆಫ್‌’ ಸಿನಿಮಾದಲ್ಲಿ ದಾದಿಯರ ಬದುಕಿನ ಚಿತ್ರಣವಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡುವ ದಾದಿಯರು ಕನಿಷ್ಠ ಸ್ಯಾನಿಟರಿ ನ್ಯಾಪ್‌ಕಿನ್ ಅನ್ನು ಖರೀದಿಸಲೂ ಸಹ ಹೊರಹೋಗುವುದಿಲ್ಲ. ಅಲ್ಲಿ ಅಷ್ಟೊಂದು ಕಟ್ಟುಪಾಡುಗಳಿರುತ್ತವೆ. ಆ ದೇಶಗಳಿಂದ ವಾಪಸ್ ಬಂದವರಲ್ಲಿ ಬಹುತೇಕರಿಗೆ ಈ ದೇಶದಲ್ಲಿ ಜೀವನ ಮಾಡಲು ಸಾಧ್ಯವಾಗದು. ಹಾಗಾಗಿ, ಅರ್ಧದಷ್ಟು ಮಂದಿ ವಾಪಸ್ ತೆರಳುತ್ತಾರೆ. ಅವರ ಇಲ್ಲಿನ ಬದುಕು ಇರಾಕ್‌ಗಿಂತಲೂ ಕಡೆಯಾಗಿರುತ್ತದೆ. ಹಾಗಾಗಿ, ಅವರು ಇರಾಕ್‌ನಲ್ಲಿ ರಾಸಾಯನಿಕಯುಕ್ತ ಗಾಳಿ ಉಸಿರಾಡುತ್ತಾ, ಸಾವು ಯಾವಾಗ ಬೇಕಾದರೂ ಬರಬಹುದು ಎಂಬ ಅರಿವಿದ್ದರೂ ಅಲ್ಲಿಗೆ ದುಡಿಯಲು ಹೋಗುತ್ತಾರೆ ಎಂದರು.

ರತ್ನೋತ್ತಮ ಸೇನ್‌ಗುಪ್ತಾ ತಮ್ಮ ನಿರ್ದೇಶನದ ‘ಅಂಡ್ ದೇ ಮೇಡ್ ಕ್ಲಾಸಿಕ್ಸ್‌’ ಸಾಕ್ಷ್ಯಚಿತ್ರದ ಕುರಿತು ಮಾಹಿತಿ ನೀಡಿದರು. 90 ವರ್ಷದ ತುಂಬು ಜೀವನ ನಡೆಸಿದ್ದ ಚಿತ್ರಕಥೆಗಾರ ನಬೆಂದು ಘೋಷ್, 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ‘ಪರಿಣಿತಾ’, ‘ದೇವದಾಸ್’, ‘ಬಂಧಿನಿ’, ‘ಸುಜಾತ’, ‘ತೀಸ್ರಿ ಕಸಂ’ದಂಥ ಸಿನಿಮಾಗಳಿಗೆ ಚಿತ್ರಕಥೆಗಳನ್ನು ಬರೆದುಕೊಟ್ಟವರು ನಬೆಂದು ಘೋಷ್. ಅವರ ಕಣ್ಣಿನಲ್ಲಿ ಈ ಸಿನಿಮಾಗಳು ಹೇಗೆ ಮೂಡಿವೆ ಎಂಬುದನ್ನು ಈ ಸಾಕ್ಷ್ಯಚಿತ್ರ ವಿವರಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.