ADVERTISEMENT

ಸುದ್ದಿ ನೀಡಿಕೆ ಬದಲಾವಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST
ಸುದ್ದಿ ನೀಡಿಕೆ ಬದಲಾವಣೆ ಅಗತ್ಯ
ಸುದ್ದಿ ನೀಡಿಕೆ ಬದಲಾವಣೆ ಅಗತ್ಯ   

ಬೆಂಗಳೂರು: `ಸುದ್ದಿ ನೀಡುವ ವಿಚಾರದಲ್ಲಿ ಟಿ.ವಿ. ಚಾನೆಲ್‌ಗಳ ಪ್ರವೃತ್ತಿ ಬದಲಾಗಬೇಕು. ಮಾಧ್ಯಮಗಳು ಸಮಾಜಮುಖಿಯಾದ ಮೌಲ್ಯಾಧಾರಿತ ಸುದ್ದಿ ನೀಡಲು ಒತ್ತು ಕೊಡಬೇಕು~ ಎಂದು ಪತ್ರಕರ್ತ ಕೆ.ಎಂ.ಮಂಜುನಾಥ್ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, `ಯುವ ಪತ್ರಕರ್ತರಿಗೆ ಭಾಷಾ ಪ್ರಯೋಗ, ಪದಗಳ ಬಳಕೆ ಹಾಗೂ ಅಧ್ಯಯನದ ಕೊರತೆ ಇದೆ. ಮಾಧ್ಯಮ ವಲಯದಲ್ಲಿರುವ ಭ್ರಷ್ಟರ ವಿರುದ್ಧ ಪತ್ರಕರ್ತರ ಸಂಘಟನೆಗಳು ಕ್ರಮ ಕೈಗೊಳ್ಳಬೇಕು~ ಎಂದು ಸಲಹೆ ನೀಡಿದರು.

`ಪ್ರಜಾವಾಣಿ~ಯ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅವರು `ಮಾಧ್ಯಮ ಸ್ವಾತಂತ್ರ್ಯ ಅತಿಯಾಯಿತೇ?~ ಕುರಿತು ವಿಚಾರ ಮಂಡಿಸಿದರು. `ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಇದೆಯೇ ಹೊರತು ಅದರ ಬಗ್ಗೆ ಪ್ರತ್ಯೇಕ ಉಲ್ಲೇಖ ಇಲ್ಲ. ಅದಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂದು ಸಂವಿಧಾನ ರಚನೆ ಸಮಿತಿಯ ಕೆಲ ಸದಸ್ಯರು ಪ್ರತಿಪಾದಿಸಿದ್ದರು.

ಹೊಸಬಗೆಯ ಕಾನೂನು, ಮಾರ್ಗಸೂಚಿ ಮತ್ತು ನಿಯಮಾವಳಿಗಳ ಪರೋಕ್ಷ ಮಾರ್ಗದ ಮೂಲಕ ಮಾಧ್ಯಮವನ್ನು ನಿಯಂತ್ರಿಸಲು ಪ್ರಯತ್ನ ನಡೆಯುತ್ತಿರುವಾಗ ಈ ಬಗ್ಗೆ ಮರು ಚಿಂತನೆ ನಡೆಸುವ ಅಗತ್ಯ ಇದೆ~ ಎಂದು ಅವರು ಹೇಳಿದರು. ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.