ADVERTISEMENT

`ಸೂಪರ್ ಕಂಪ್ಯೂಟರ್‌ಗಳು ಇಂದಿನ ಅಗತ್ಯ'

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 19:37 IST
Last Updated 22 ಫೆಬ್ರುವರಿ 2013, 19:37 IST
ಸಿ-ಡಾಕ್ ಸಂಸ್ಥೆ ಏರ್ಪಡಿಸಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ `ಪ್ಯಾರಾಕಾಂಪ್‌ಟೆಕ್ ಇಂಡಿಯಾ 2013' ಕೈಪಿಡಿಯನ್ನು ಬಿಡುಗಡೆ ಮಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಹ ನಿರ್ದೇಶಕ ಪ್ರೊ.ಎನ್. ಬಾಲಕೃಷ್ಣನ್, ಅದರ ಮೊದಲ ಪ್ರತಿಯನ್ನು ಸಿ-ಡಾಕ್ ಮಾಜಿ ನಿರ್ದೇಶಕ ಎಸ್.ರಾಮಕೃಷ್ಣನ್ ಅವರಿಗೆ ನೀಡಿದರು. ಸಿ- ಡಾಕ್ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಶರತ್‌ಚಂದ್ರ ಬಾಬು, ನಿಯಾಸ್ ನಿರ್ದೇಶಕ ಪ್ರೊ. ವಿ.ಎಸ್. ರಾಮಮೂರ್ತಿ ಮತ್ತು ಐಐಎಸ್‌ಸಿ ಪ್ರಾಧ್ಯಾಪಕ ಪ್ರೊ. ಆರ್.ಗೋವಿಂದರಾಜನ್ ಚಿತ್ರದಲ್ಲಿದ್ದಾರೆ 	-ಪ್ರಜಾವಾಣಿ ಚಿತ್ರ

ಬೆಂಗಳೂರು: `ದೇಶದ ವಿವಿಧ ಕ್ಷೇತ್ರಗಳ ಪ್ರಗತಿಗೆ ಸೂಪರ್ ಕಂಪ್ಯೂಟರ್‌ಗಳು ಅತ್ಯವಶ್ಯವಾಗಿದ್ದು, ಅಮೆರಿಕ, ಚೀನಾ, ದಕ್ಷಿಣ ಕೋರಿಯಾದಂತಹ ರಾಷ್ಟ್ರಗಳಲ್ಲಿ ಈ ಸಾಧನಗಳು ಯೋಜನೆ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಹ ನಿರ್ದೇಶಕ ಪ್ರೊ. ಎನ್. ಬಾಲಕೃಷ್ಣನ್ ತಿಳಿಸಿದರು.

ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (ಸಿ-ಡಾಕ್) ಸಂಸ್ಥೆ ಆಶ್ರಯದಲ್ಲಿ ಶುಕ್ರವಾರದಿಂದ ಏರ್ಪಡಿಸಿದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಹವಾಮಾನ ಮುನ್ಸೂಚನೆ, ವಾತಾವರಣ ಸಂಶೋಧನೆ, ತೈಲ ಮತ್ತು ಅನಿಲ ತಪಾಸಣೆ, ಅಣ್ವಸ್ತ್ರ ಶೋಧ, ರಾಸಾಯನಿಕ ಹಾಗೂ ಜೈವಿಕ ಪರೀಕ್ಷೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೂಪರ್ ಕಂಪ್ಯೂಟರ್‌ಗಳು ಅತ್ಯಂತ ಉಪಯುಕ್ತವಾಗಿದೆ. ಆದ್ದರಿಂದಲೇ ಜಗತ್ತಿನ ಮುಂದುವರಿದ ದೇಶಗಳು ಈ ತಂತ್ರಜ್ಞಾನಕ್ಕೆ ಅಷ್ಟೊಂದು ಮಹತ್ವ ನೀಡಿವೆ' ಎಂದು ವಿವರಿಸಿದರು.

`ಪ್ರಪಂಚದ ಮೊದಲ 500 ಸೂಪರ್ ಕಂಪ್ಯೂಟರ್‌ಗಳನ್ನು ಗಣನೆಗೆ ತೆಗೆದುಕೊಂಡಾಗ ನಾವು ತೀರಾ ಹಿಂದುಳಿದಿರುವುದು ಎದ್ದು ಕಾಣುವ ಅಂಶವಾಗಿದೆ. ದೇಶವು ಇಂತಹ ಸಾಧನಗಳನ್ನು ಹೊಂದಲು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಅವಕಾಶ ಒದಗಿಸಲಾಗಿದೆ' ಎಂದು ಹೇಳಿದರು.

`ದತ್ತಾಂಶಗಳನ್ನೇ ಪ್ರಧಾನವಾಗಿ ಹೊಂದಿರುವ ಈ ಸಾಧನಗಳು ಅಧಿಕ ಕೋರ್ ಪ್ರೊಸೆಸಿಂಗ್ ಘಟಕಗಳನ್ನು ಹೊಂದಿರುತ್ತವೆ. ಗಹನವಾದ ಮಾಹಿತಿ ಆಗರವನ್ನೇ ಇವು ಒಳಗೊಂಡಿರುತ್ತವೆ. ಆದರೆ, ಹೆಚ್ಚಿನ  ವಿದ್ಯುತ್ ಬಳಕೆಯಿಂದ ಜಾಗತಿಕ ತಾಪಮಾನಕ್ಕೆ ಅವುಗಳ ಕೊಡುಗೆ ಹೆಚ್ಚಾಗುವ ಅಪಾಯ ಇದೆ' ಎಂದರು. ಪ್ರೊ. ಆರ್. ಗೋವಿಂದರಾಜನ್ ಪ್ರಧಾನ ಭಾಷಣ ಮಾಡಿದರು. ನಿಯಾಸ್ ನಿರ್ದೇಶಕ ಪ್ರೊ.ವಿ.ಎಸ್. ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.