ADVERTISEMENT

ಸೈಬರ್ ಅಪರಾಧ: ಇ-ಮೇಲ್ ಪಾಸ್‌ವರ್ಡ್ ಬದಲಾಯಿಸಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ಬೆಂಗಳೂರು: `ಸುರಕ್ಷತೆಯ ದೃಷ್ಟಿಯಿಂದ ಇ-ಮೇಲ್‌ಗಳ `ಪಾಸ್‌ವರ್ಡ್~ಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಬದಲಾವಣೆ ಮಾಡಬೇಕು~ ಎಂದು ನಿವೃತ್ತ ಪೊಲೀಸ್ ಅಧಿಕಾರಿ (ಸೈಬರ್ ಅಪರಾಧ) ಕುಣಿಗಲ್ ಶ್ರೀಕಂಠ ಅಭಿಪ್ರಾಯಪಟ್ಟರು.

`ಪಾಸ್‌ವರ್ಡ್‌ಗಳನ್ನು ಕದ್ದು, ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದುದರಿಂದ ಯಾವುದೇ ಕಾರಣಕ್ಕೂ, ಯಾರ ಮುಂದೆಯೂ ಪಾಸ್‌ವರ್ಡ್ ಮಾಹಿತಿ ನೀಡಬಾರದು. `ಲಾಟರಿ ಹೊಡೆದಿದೆ. ನಿಮ್ಮ ಪಾಸ್‌ವರ್ಡ್ ನೀಡಿದರೆ ಲಾಟರಿ ಮೊತ್ತ ನೀಡುತ್ತೇವೆ~ ಎಂಬ ಸಂದೇಶಗಳು ಸುಳಿದಾಡುತ್ತಿವೆ. ಆಮಿಷಕ್ಕೆ ಬಲಿಯಾಗದೇ ಗೌಪ್ಯತೆ ಕಾಪಾಡಿಕೊಳ್ಳಿ~ ಎಂದು ಅವರು ಹೇಳಿದರು.

ಭಾರತೀಯ ವಕೀಲರ ಸಂಘ ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ `ಸೈಬರ್ ಅಪರಾಧ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ತಾವು ಕರ್ತವ್ಯದಲ್ಲಿದ್ದಾಗ ನಡೆದ ಅನೇಕ ಘಟನೆಗಳನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, `ಸೈಬರ್ ಕಾನೂನು ಕೇವಲ ಒಂದು ವಿಷಯವಾಗಿ ಉಳಿದಿಲ್ಲ. ಬದಲಿಗೆ ಕಾನೂನು ವೃತ್ತಿಯ ಎಲ್ಲ ವಿಷಯಗಳಿಗೂ ಇದು ಆಧಾರಸ್ತಂಭ ಇದ್ದಂತೆ. ವಕೀಲ ಯಾವುದೇ ವಿಷಯದಲ್ಲಿ ತಜ್ಞನಾಗಿದ್ದರೂ ಮೊದಲು ಸೈಬರ್ ಅಪರಾಧದ ಬಗ್ಗೆ ಆತ ತಿಳಿದುಕೊಳ್ಳಲೇ ಬೇಕು~ ಎಂದರು.

ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವಾಗ, ಅದರ ದುರ್ಬಳಕೆ ಬಗ್ಗೆಯೂ ತಿಳಿವಳಿಕೆ ನೀಡಬೇಕು. ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸೈಬರ್ ಅಪರಾಧದಿಂದ ಯಾವೆಲ್ಲ ಅನಾಹುತಗಳ ನಡೆಯುತ್ತಿವೆ ಎಂಬ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಇದು ಮನೆಯ ಹಂತದಲ್ಲಿಯೇ ಆಗಬೇಕು~ ಎಂದು ಅವರು ಅಭಿಪ್ರಾಯಪಟ್ಟರು.

ಕೆನರಾ ಬ್ಯಾಂಕ್ ಉಪ ವ್ಯವಸ್ಥಾಪಕ ನಿರ್ದೇಶಕ ನಾಯಗಮ್, ಅಂತರರಾಷ್ಟ್ರೀಯ ಪ್ರಜಾಸತ್ತಾತ್ಮಕ ವಕೀಲರ ಸಂಘದ ಅಧ್ಯಕ್ಷೆ ಜೆ.ಮಿರರ್, ಸಂಘದ ಅಧ್ಯಕ್ಷ ಜಿತೇಂದ್ರ ಶರ್ಮ,  ಪ್ರಧಾನ ಕಾರ್ಯದರ್ಶಿ ಸರಬ್‌ಜಿತ್ ಸಿಂಗ್, ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಮುರಳೀಧರ, ಹಿರಿಯ ವಕೀಲರಾದ ಎಂ.ಸಿ.ನರಸಿಂಹನ್, ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಅನಗತ್ಯ ಪಾಸ್‌ವರ್ಡ್ ಬೇಡ
`ಪತ್ನಿ- ಪತಿ, ಮಕ್ಕಳ ಹೆಸರು, ಕಾರು, ಸ್ಕೂಟರ್‌ಗಳ ಸಂಖ್ಯೆ, ಊರಿನ ಹೆಸರು ಇತ್ಯಾದಿಗಳನ್ನು ಪಾಸ್‌ವರ್ಡ್ ಮಾಡಿಕೊಳ್ಳುವುದು ಬೇಡ. ಕಠಿಣವಾದ, ಸುಲಭದಲ್ಲಿ ಬೇರೆಯವರು ಗುರುತಿಸಲು ಸಾಧ್ಯವಾಗದ ಹೆಸರು ಅಥವಾ ಸಂಖ್ಯೆಯನ್ನು ಇಟ್ಟುಕೊಳ್ಳಿ~.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT