ADVERTISEMENT

ಸ್ನೇಹಿತನ ಕೊಂದವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:47 IST
Last Updated 16 ಮೇ 2018, 19:47 IST

ಬೆಂಗಳೂರು: ಬಾರ್‌ನಲ್ಲಿ ಎಲ್ಲರ ಎದುರು ತಮಗೆ ಬೈದನೆಂಬ ಕಾರಣಕ್ಕೆ ಆಟೊ ಚಾಲಕ ಗೋಪಾಲ್ (34) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳು ಬಸವೇಶ್ವರನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕುರುಬರಹಳ್ಳಿ ಸಮೀಪದ ಕಾವೇರಿನಗರ ಆಟೊ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಹತ್ಯೆ ನಡೆದಿತ್ತು. ಈ ಸಂಬಂಧ ಮೃತನ ಸ್ನೇಹಿತರಾದ ರವಿ ಹಾಗೂ ವಿನಯ್ ಅವರನ್ನು ಸೋಮವಾರ ಸಂಜೆ ಕೋಲಾರದಲ್ಲಿ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

‘ಗೋಪಾಲ್ ನಮ್ಮ ಸ್ನೇಹಿತ. ಭಾನುವಾರ ರಾತ್ರಿ ಮೂವರೂ ಬಾರ್‌ಗೆ ಹೋಗಿದ್ದೆವು. ಪಾನಮತ್ತರಾಗಿ ಹೊರಡುವಾಗ, ‘ನಾನಿನ್ನೂ ಕುಡಿಯಬೇಕು. ಆರ್ಡರ್ ಮಾಡಿ’ ಎಂದು ಗೋಪಾಲ್ ಜಗಳ ಶುರು ಮಾಡಿದ. ನಮ್ಮ ಬಳಿ ಹೆಚ್ಚಿನ ಹಣವಿಲ್ಲ ಎಂದು ಹೇಳಿದ್ದಕ್ಕೆ, ‘ಬಾರ್‌ಗೆ ಬಂದರೆ ತೃಪ್ತಿಯಾಗಿ ಕುಡಿಯಬೇಕು. ಕಡಿಮೆ ದುಡ್ಡು ಇಟ್ಟುಕೊಂಡು ನನ್ನನ್ನು ಏಕೆ ಕರೆದುಕೊಂಡು ಬಂದಿರಿ’ ಎಂದು ಎಲ್ಲರೆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಬೇಸರದಲ್ಲೇ ಅಲ್ಲಿಂದ ಹೊರಟು, ಕಾವೇರಿನಗರ ನಿಲ್ದಾಣಕ್ಕೆ ಬಂದು ಆಟೊದಲ್ಲಿ ಕುಳಿತುಕೊಂಡಿದ್ದೆವು’ ಎಂದು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ADVERTISEMENT

‘ಗೋಪಾಲ್ ಅಲ್ಲಿಗೂ ಬಂದು ಬೈಯ್ಯಲು ಪ್ರಾರಂಭಿಸಿದ. ಆಗ ಕೋಪದ ಭರದಲ್ಲಿ ಚಾಕುವಿನಿಂದ ಎದೆ ಹಾಗೂ ಹೊಟ್ಟೆಗೆ ಇರಿದೆವು. ಜನ ಸೇರುತ್ತಿದ್ದಂತೆಯೇ ಗಾಬರಿಯಾಗಿ ಪರಾರಿಯಾಗಿದ್ದೆವು. ಕೊಲ್ಲುವ ಉದ್ದೇಶ ನಮಗಿರಲಿಲ್ಲ’ ಎಂದು ಅವರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.