ADVERTISEMENT

`ಸ್ಫೋಟದ ರಾಜಕೀಯ ಲಾಭಕ್ಕೆ ಯತ್ನ'

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 20:03 IST
Last Updated 18 ಏಪ್ರಿಲ್ 2013, 20:03 IST

ಬೆಂಗಳೂರು: ನಗರದಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ಮೇಲೆ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುರುವಾರ ಇಲ್ಲಿ ಆರೋಪಿಸಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆ ಎರಡೂ ಪಕ್ಷಗಳು ರಾಜಕೀಯ ಲಾಭದ ಉದ್ದೇಶದಿಂದ ಈ ಪ್ರಕರಣವನ್ನು ನೋಡುತ್ತಿರುವುದು ಸರಿಯಲ್ಲ ಎಂದರು. ಇದರ ಹಿಂದೆ ಬಿಜೆಪಿ ಕೈವಾಡ ಇದೆಯೇ ಎಂಬ ಪ್ರಶ್ನೆಗೆ, ಗೋದ್ರಾ ಪ್ರಕರಣದಲ್ಲಿ ಏನಾಯಿತು ಎಂಬುದು ಗೊತ್ತಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಚುಚ್ಚಿದರು. ರಾಷ್ಟ್ರ ಮತ್ತು ರಾಜ್ಯದಲ್ಲಿ ಯಾವುದೇ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲ. ಯಾವುದೇ ಪಕ್ಷ ಅಧಿಕಾರ ಹಿಡಿಯಬೇಕಾದರೂ ಜೆಡಿಎಸ್ ಬೆಂಬಲ ಅನಿವಾರ್ಯ ಎಂದು ಪರೋಕ್ಷವಾಗಿ ಹೇಳಿದರು. 1989ರಿಂದ ರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾಯಿತು. 2004ರಲ್ಲಿ ರಾಜ್ಯದಲ್ಲೂ ಆ ಪ್ರಯೋಗ ಶುರುವಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಚುನಾವಣೆ ನಂತರ ಜೆಡಿಎಸ್ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂದು ಪ್ರಶ್ನಿಸಿದಾಗ, `ಈ ರೀತಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಕಾಲ ಪಕ್ವವಾಗಿಲ್ಲ. ಮೈತ್ರಿ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ರಾಜ್ಯದ ಜನತೆ ಜೆಡಿಎಸ್ ಅನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಇದೆ' ಎಂದರು.
ಹಾಸನ ಜಿಲ್ಲೆಯ ಬೇಲೂರಿನಿಂದ ಶನಿವಾರ ಚುನಾವಣಾ ಪ್ರಚಾರ ಆರಂಭಿಸಲಾಗುವುದು. ಮುಂದಿನ ತಿಂಗಳ ಮೂರರವರೆಗೂ ತಂಡಗಳಲ್ಲಿ ಎಲ್ಲ ಕಡೆ ಪ್ರಚಾರ ಮಾಡಲಾಗುವುದು. ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಎಂ.ಸಿ.ನಾಣಯ್ಯ, ಪಿ.ಜಿ.ಆರ್.ಸಿಂಧ್ಯ, ಎ.ಕೃಷ್ಣಪ್ಪ ಮೊದಲಾದವರು ವಿವಿಧೆಡೆ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದು ಅವರು ಹೇಳಿದರು.

ಮುದ್ದೇಬಿಹಾಳ, ಮುಳಬಾಗಲು, ಬೇಲೂರು, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಗೊಂದಲ ಇರುವುದು ನಿಜ. ಮುಖಂಡರೆಲ್ಲ ಕುಳಿತು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಮಾಜಿ ಸ್ಪೀಕರ್ ಕೃಷ್ಣ ಪಕ್ಷದ ಶಿಸ್ತಿನ ಸಿಪಾಯಿ. ಆ ಕಾರಣಕ್ಕಾಗಿಯೇ 9 ಬಾರಿ ಟಿಕೆಟ್ ನೀಡಲಾಗಿತ್ತು. ಆದರೆ, ಎಷ್ಟು ಬಾರಿ ಗೆದ್ದಿದ್ದಾರೆ ಎಂಬುದನ್ನು ಅವರೇ ಯೋಚಿಸಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.