ADVERTISEMENT

ಸ್ವರೂಪವಿಲ್ಲದ ‘ಕಬ್ಬನ್‌ ಉದ್ಯಾನ ಪ್ರಾಧಿಕಾರ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:58 IST
Last Updated 20 ಮಾರ್ಚ್ 2014, 19:58 IST

ಬೆಂಗಳೂರು: ಯಾವುದೇ ರೂಪು ರೇಷೆಗಳಿಲ್ಲದೆ, ಕರಡು ಸಿದ್ಧವಿಲ್ಲದೆ, ಯಾವುದೇ ಸ್ವರೂಪವೂ ಇಲ್ಲದೆ ಕಬ್ಬನ್‌ ಉದ್ಯಾನ ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ  ಬಜೆಟ್‌ನಲ್ಲಿ ಅನುಮೋದನೆ ನೀಡಿದೆ.

ಕಬ್ಬನ್‌ ಉದ್ಯಾನ ನಿರ್ವಹಣೆಗೆ ಪ್ರಾಧಿಕಾರ ಅಗತ್ಯವಿಲ್ಲ ಎಂದು ಪರಿಸರ ವಾದಿಗಳು ಸುಮಾರು ಎರಡು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಈ ಪ್ರತಿಭಟನೆಯ ಬಗ್ಗೆ ಗಮನ ನೀಡದ ರಾಜ್ಯ ಸರ್ಕಾರ ಪ್ರಾಧಿಕಾರ ರಚನೆ ವಿಚಾರವನ್ನು ಬಜೆಟ್‌ನಲ್ಲಿ ಘೋಷಿಸಿದೆ.

ಪ್ರಾಧಿಕಾರ ರಚನೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದೆ ಎಂಬುದು ನಗರದ ಪರಿಸರ­ವಾದಿಗಳ ದೂರು. ಪ್ರಾಧಿಕಾರ ರಚನೆಯಾದರೆ ಅದಕ್ಕಾಗಿ ಪ್ರತ್ಯೇಕವಾಗಿ ಹಣ ಮೀಸಲಿಡ­ಬೇಕಾ­ಗುತ್ತದೆ. ಅಲ್ಲದೆ, ಪ್ರಾಧಿಕಾರದ ಹೆಸರಿನಲ್ಲಿ ಉದ್ಯಾನವನ್ನು ವಾಣಿಜ್ಯೀಕರಣ­ಗೊಳಿಸುವ ಮತ್ತು ಉದ್ಯಾನ ಖಾಸಗಿಯವರ ಪಾಲಾಗುವ ಆತಂಕವೂ ಇದೆ ಎಂಬುದು ಪರಿಸರವಾದಿಗಳ ವಾದ.

ನೂತನ ಪ್ರವಾಸೋದ್ಯಮ ನೀತಿ ರೂಪಿಸಲು ಟಿ.ವಿ. ಮೋಹನ್‌ದಾಸ್ ಪೈ ಅಧ್ಯಕ್ಷತೆಯಲ್ಲಿ ರಚಿ­ಸ­ಲಾಗಿದ್ದ ವಿಷನ್ ಗ್ರೂಪ್ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕಬ್ಬನ್‌ಪಾರ್ಕ್‌ ನಿರ್ವಹಣೆಗೆ ಕಬ್ಬನ್‌ ಉದ್ಯಾನ ಪ್ರಾಧಿಕಾರ ರಚನೆ ಮಾಡು­ವಂತೆ ಶಿಫಾರಸು ಮಾಡಿತ್ತು. ಆ ಶಿಫಾರಸಿಗೆ ಅನ್ವಯ­ವಾಗಿ ಸರ್ಕಾರ ಬಜೆಟ್‌ನಲ್ಲಿ ಈ ಅಂಶವನ್ನು ಸೇರಿಸಿದೆ. ಪ್ರಾಧಿ­ಕಾರ ರಚನೆಗೆ ಬಿ–ಪ್ಯಾಕ್‌ ಸಂಘಟನೆಯು ಸಂಪೂರ್ಣವಾಗಿ ಲಾಬಿ ನಡೆಸುತ್ತಿದೆ ಎಂಬುದು ಪರಿಸರವಾದಿಗಳ ದೂರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿ–ಪ್ಯಾಕ್‌ ಸಂಘ­ಟ­­ನೆಯ  ಉಪಾಧ್ಯಕ್ಷ ಟಿ.ವಿ. ಮೋಹನ್‌­ದಾಸ್‌ ಪೈ, ‘ವಿಷನ್‌ ಸಮೂಹವು ಸಲ್ಲಿಸಿದ ಪ್ರವಾಸೋದ್ಯಮ ನೀತಿಯಲ್ಲಿ ಕಬ್ಬನ್‌ ಉದ್ಯಾನದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದೆವು. ಅದರಂತೆ, ಮುಖ್ಯ­ಮಂತ್ರಿ ಸಿದ್ದರಾಮಯ್ಯನವರು ಈ ವಿಚಾರವನ್ನು ಬಜೆಟ್‌ನಲ್ಲಿ ಮಂಡಿಸಿದ್ದಾರೆ’ ಎಂದು ಹೇಳಿದರು.

‘ಕಬ್ಬನ್‌ ಉದ್ಯಾನದಲ್ಲಿ ಬಹಳಷ್ಟು ಹಳೆಯ ಐತಿಹಾಸಿಕ ಪ್ರತಿಮೆಗಳಿವೆ. ಮ್ಯೂಸಿಕ್‌ ಬ್ಯಾಂಡ್‌ ಟವರ್‌ಯಿದೆ. ಆದರೆ, ಸರಿಯಾದ ರೀತಿಯಲ್ಲಿ ನಿರ್ವಹಣೆಯಿಲ್ಲದೆ ಅವು ಹಾಳಾಗುತ್ತಿವೆ. ಇದ­ರಿಂದ, ಕಬ್ಬನ್‌ ಉದ್ಯಾನಕ್ಕೆ ಒಂದು ಹೊಸ ರೂಪು ನೀಡಿ, ಲಂಡನ್‌ನಲ್ಲಿರುವ
ಉದ್ಯಾನ­ಗಳಂತೆ ಪ್ರವಾ­ಸೋದ್ಯಮ ಕೇಂದ್ರೀತ ಉದ್ಯಾನ­ಗಳನ್ನಾಗಿ ಮಾಡ­ಬೇಕು ಎಂದು ವರದಿಯಲ್ಲಿ ಸಲ್ಲಿಸಿದ್ದೆವು’ ಎಂದು ಹೇಳಿದರು.

ಆರೋಪಗಳಿಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ಅವರು, ‘ಕಬ್ಬನ್‌ ಉದ್ಯಾನ ಮತ್ತು ಲಾಲ್‌­ಬಾಗ್‌ ಎರಡೂ ನಮ್ಮ ಪಾರಂಪರಿಕ ಉದ್ಯಾನಗ­ಳಾ­ಗಿವೆ. ಪ್ರಾಧಿಕಾರ ರಚನೆಯಿಂದ ಕಬ್ಬನ್‌ ಉದ್ಯಾನವನ್ನು ಇನ್ನಷ್ಟು ಅಭಿವೃದ್ಧಿ­ಗೊಳಿಸಬಹು­ದಾಗಿದೆ’ ಎಂದರು.

‘ಪ್ರವಾಸೋದ್ಯಮ ಇಲಾಖೆಯು ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ನಗರದ ಉದ್ಯಾನ­ಗಳನ್ನು ಪ್ರವಾಸೋ­ದ್ಯಮದ ಕೇಂದ್ರವಾಗಿಸ­ಬಹು­ದೆಂಬುದನ್ನು ತೋರಿಸಲು ಪ್ರಾಧಿಕಾರ ರಚಿಸ­ಬೇಕೆಂದು ಸಲಹೆ ನೀಡಿತ್ತು. ಕಬ್ಬನ್‌ ಉದ್ಯಾನಕ್ಕೆ  ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು
ಬರು­ತ್ತಾರೆ. ಅವರನ್ನು ಸೆಳೆಯಲು ಕಬ್ಬನ್‌ ಉದ್ಯಾನದ ಸಮರ್ಪಕ ನಿರ್ವಹಣೆ ಮತ್ತು ಅಭಿವೃದ್ಧಿ­ಪಡಿ­ಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರ ರಚನೆ ಅಗತ್ಯ’ ಎಂದು ಅವರು ಅಭಿಪ್ರಾಯ­ಪಟ್ಟರು.

‘ಕಬ್ಬನ್‌ ಉದ್ಯಾನ ಪ್ರಾಧಿಕಾರ ರಚನೆಯಾ­ದರೂ ಉದ್ಯಾನ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುತ್ತದೆ. ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಪ್ರಾಧಿಕಾರ ಉದ್ಯಾನದ ಅಭಿವೃದ್ಧಿ ಕಾರ್ಯ ನಿರ್ವಹಿಸಲಿದೆ. ಪ್ರಾಧಿಕಾರದ ರಚನೆಯಿಂದ ಕಬ್ಬನ್‌ ಉದ್ಯಾನ­ದಲ್ಲಿ ನಡೆಯುತ್ತಿರುವ ಅನೈತಿಕ ಚಟವಟಿಕೆಗಳಿಗೆ ಕಡಿವಾಣ ಹಾಕಬಹುದು’ ಎಂದು ಅವರು ಮಾಹಿತಿ ನೀಡಿದರು.

‘ಪ್ರಾಧಿಕಾರ ರಚನೆಯ ವಿಷಯ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಪ್ರಾಧಿಕಾರದ ರೂಪುರೇಷೆ­ಗಳ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಪ್ರಾಧಿಕಾರದ ಕಾರ್ಯ ಹಾಗೂ ರೂಪುರೇಷೆ ಕುರಿತು ಚರ್ಚೆ­ಯಾಗಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.