ADVERTISEMENT

ಹತ್ತರಲ್ಲಿ ಬೆಂಗಳೂರಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಹತ್ತರಲ್ಲಿ ಬೆಂಗಳೂರಿಗೆ ಸ್ಥಾನ
ಹತ್ತರಲ್ಲಿ ಬೆಂಗಳೂರಿಗೆ ಸ್ಥಾನ   

ಬೆಂಗಳೂರು: ಮುಂದಿನ ನಾಲ್ಕು ವರ್ಷಗಳಲ್ಲಿ ನವನಾವಿನ್ಯ ತಂತ್ರಜ್ಞಾನ ಉದ್ಯಮಗಳ ಸ್ಥಾಪನೆಯಲ್ಲಿ ವಿಶ್ವದ ಹತ್ತು ಮುಂಚೂಣಿ ತಾಣಗಳ ಪಟ್ಟಿಯಲ್ಲಿ ಬೆಂಗಳೂರು, ದೇಶದ ಏಕೈಕ ನಗರವಾಗಿ ಗುರುತಿಸಿಕೊಳ್ಳಲಿದೆ.

ಜಾಗತಿಕ ಸಲಹಾ ಸಂಸ್ಥೆ ಕೆಪಿಎಂಜಿ ‘ದಿ ಚೇಂಜಿಂಗ್ ಲ್ಯಾಂಡ್‌ಸ್ಕೇಪ್ ಆಫ್ ಡಿಸ್ಟ್ರಪ್ಟಿವ್ ಟೆಕ್ನಾಲಜೀಸ್’ ಶೀರ್ಷಿಕೆಯಡಿ ಸಿದ್ಧಪಡಿಸಿರುವ ವರದಿಯಲ್ಲಿ ಬೆಂಗಳೂರು ನಗರ ಮತ್ತು ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ 8ನೇ ಸ್ಥಾನವನ್ನು ಸಮಾನವಾಗಿ ಹಂಚಿಕೊಳ್ಳಲಿವೆ. ಚೀನಾದ ಶಾಂಘೈ ಅಗ್ರ ಸ್ಥಾನದಲ್ಲಿದ್ದರೆ, ಟೋಕಿಯೊ, ಲಂಡನ್‌, ನ್ಯೂಯಾರ್ಕ್‌, ಬೀಜಿಂಗ್‌, ಸಿಂಗಪುರ ಹಾಗೂ ಸೋಲ್‌ ನಂತರದ ಸ್ಥಾನದಲ್ಲಿರಲಿವೆ.

ಕಳೆದ ವರ್ಷ ಅಗ್ರ 10 ನಗರಗಳಲ್ಲಿ ಅಮೆರಿಕ ಮತ್ತು ಚೀನಾದ ನಗರಗಳು ಪ್ರಾಬಲ್ಯ ಸಾಧಿಸಿದ್ದವು. ಈ ವರ್ಷದ ಅಗ್ರ 10ರಲ್ಲಿ ಅಮೆರಿಕ, ಏಷ್ಯಾ, ಯುರೋಪ್ ಮತ್ತು ಇಸ್ರೇಲ್ ನಗರಗಳೂ ಇವೆ ಎಂದು ಕೆಪಿಎಂಜಿ ವರದಿ ತಿಳಿಸಿದೆ.

ADVERTISEMENT

ಈ ವರದಿಯ ಪ್ರಕಾರ, ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಮುಂಚೂಣಿಯಲ್ಲಿರುವ 800 ತಂತ್ರಜ್ಞಾನ ಉದ್ಯಮಗಳು ಹೂಡಿಕೆ ಮಾಡಲು ಭಾರತದ ಮೇಲೆ ಶೇ 13ರಷ್ಟು ಒಲವು ವ್ಯಕ್ತಪಡಿಸಿವೆ. ಅಮೆರಿಕದ ಮೇಲೆ ಶೇಕಡ 34 ಮತ್ತು ಚೀನಾದ ಮೇಲೆ ಶೇ 26ರಷ್ಟು ಒಲವು ಹೊಂದಿವೆ.

ತಂತ್ರಜ್ಞಾನಕ್ಕೆ ಸಂಬಂಧಿಸಿದ 5,200 ನವೋದ್ಯಮಗಳಲ್ಲಿ 1,000 ನವೋದ್ಯಮಗಳು 2017ರಲ್ಲಿ ಆರಂಭವಾಗಿವೆ. ಬೆಂಗಳೂರು, ದೆಹಲಿ, ಮುಂಬೈನಲ್ಲಿ ಶೇ 80ರಷ್ಟು ನವೋದ್ಯಮಗಳಿವೆ. ಇದರಲ್ಲಿ ಶೇ 50ರಷ್ಟು ನವೋದ್ಯಮಗಳು ಬೆಂಗಳೂರು ನಗರವೊಂದರಲ್ಲೇ ಸ್ಥಾಪಿತಗೊಂಡಿವೆ.

ನವನಾವಿನ್ಯ ತಂತ್ರಜ್ಞಾನ ಉದ್ಯಮ ಸ್ಥಾಪನೆಯಲ್ಲಿ ದೇಶ ಇನ್ನಷ್ಟು ಮುನ್ನುಗ್ಗುತ್ತಿದೆ. ಜಾಗತಿಕ ಆವಿಷ್ಕಾರ ಸೂಚ್ಯಂಕದ ಪ್ರಕಾರ 2017ರಲ್ಲಿ ಭಾರತ  60ನೇ ಸ್ಥಾನಕ್ಕೇರಿದೆ. 2016ರಲ್ಲಿ 66ನೇ ಸ್ಥಾನದಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.