ADVERTISEMENT

ಹಲ್ಲೆ ಪ್ರಕರಣ ಖಂಡಿಸಿ ದಸಂಸ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್.ಮೂರ್ತಿ, ಮಾತನಾಡಿ `ನ್ಯಾಯ ಕೇಳಲು ಬಂದ ಕೆಳವರ್ಗದ ಜನರ ಮೇಲೆ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ವಿಳಂಬ ಮಾಡುತ್ತಿರುವುದು ಸರ್ಕಾರದ ತಪ್ಪು. ಇದನ್ನು ಪ್ರಶ್ನಿಸಿ, ನ್ಯಾಯವನ್ನು ಕೇಳಲು ಹೋದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಇನ್ನೂ ದೊಡ್ಡ ತಪ್ಪು' ಎಂದರು.

`ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗದ್ದಲ ಉಂಟಾದ ಕಾರಣಕ್ಕೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇದರಿಂದ ಉದ್ರಿಕ್ತರಾದ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಲ್ಲಿನ ಪೆಟ್ಟು ಬಿದ್ದ ಕಾರಣಕ್ಕೆ ಪ್ರತಿಭಟನಾಕಾರರನ್ನು ಮನಬಂದಂತೆ ಹೊಡೆಯಲಾಗಿದೆ. ಪ್ರತಿಭಟನೆಗೆ ಬಂದಿದ್ದ ವಾಹನಗಳನ್ನೂ ಪೊಲೀಸರು ಜಖಂಗೊಳಿಸಿದ್ದಾರೆ' ಎಂದರು.

`ದೌರ್ಜನ್ಯ ಎಸಗಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಬೇಕು. ಸದಾಶಿವ ಆಯೋಗದ ವರದಿಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕು. ಪ್ರತಿಭಟನಾಕಾರರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು' ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.