ADVERTISEMENT

ಹಾಡಹಗಲೇ ಮಹಿಳೆ ಕೊಲೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 20:05 IST
Last Updated 9 ಅಕ್ಟೋಬರ್ 2012, 20:05 IST
ಹಾಡಹಗಲೇ ಮಹಿಳೆ ಕೊಲೆ
ಹಾಡಹಗಲೇ ಮಹಿಳೆ ಕೊಲೆ   

ಬೆಂಗಳೂರು: ಬಸವೇಶ್ವರನಗರ ಬಳಿಯ ಕೆಎಚ್‌ಬಿ ಕಾಲೊನಿಯಲ್ಲಿ ದುಷ್ಕರ್ಮಿಗಳು ಮಂಗಳವಾರ ಹಾಡಹಗಲೇ ಮಹಿಳೆಯನ್ನು ಕೊಲೆ ಮಾಡಿ 35 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಕೆಎಚ್‌ಬಿ ಕಾಲೊನಿ ಒಂದನೇ ಅಡ್ಡರಸ್ತೆ ನಿವಾಸಿ ಮುರುಗಾನಂದ ಎಂಬುವರ ಪತ್ನಿ ಸುಜಾತಾ (37) ಕೊಲೆಯಾದವರು. ಅವರಿಗೆ ತರುಣ್ ಹಾಗೂ ರೋಷನ್ ಎಂಬ ಮಕ್ಕಳಿದ್ದಾರೆ. ಮುರುಗಾನಂದ ಅವರು ಕಾಮಾಕ್ಷಿಪಾಳ್ಯದಲ್ಲಿ ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದಾರೆ.

ಮುರುಗಾನಂದ ಅವರು ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಕಳುಹಿಸಿ, ಪ್ರಿಂಟಿಂಗ್ ಪ್ರೆಸ್‌ಗೆ ಹೋಗಿದ್ದರು. ಈ ವೇಳೆ ಸುಜಾತಾ ಅವರೊಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಮನೆಗೆ ಬಂದಿರುವ ದುಷ್ಕರ್ಮಿಗಳು, ಅವರ ಬಾಯಿಗೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ, ಅಲ್ಮೇರಾದಲ್ಲಿದ್ದ 35 ಸಾವಿರ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮನೆಗೆಲಸದಾಕೆ ಲಕ್ಷ್ಮಮ್ಮ ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಬಳಿ ಬಂದಾಗ ಸುಜಾತಾ ಅವರು ಬಾಗಿಲು ತೆರೆದಿಲ್ಲ. ಇದರಿಂದಾಗಿ ಲಕ್ಷ್ಮಮ್ಮ ಬಾಗಿಲ ಬಳಿಯೇ ಕಾಯುತ್ತಾ ಕುಳಿತಿದ್ದರು. ಅದೇ ವೇಳೆಗೆ ಮನೆಯ ಬಳಿ ಬಂದ ಸುಜಾತಾ ಅವರ ತಮ್ಮ ಸುಂದರ್, ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಅವರು ಸಹೋದರಿಯ ಮೊಬೈಲ್‌ಗೆ ಮೂರ‌್ನಾಲ್ಕು ಬಾರಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿ ಮಾತನಾಡಿದ ಅಪರಿಚಿತ ವ್ಯಕ್ತಿ, ಸುಜಾತಾ ಅವರು ಅಪಘಾತದಲ್ಲಿ ಗಾಯಗೊಂಡಿದ್ದು ಸರ್ವೋದಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ.

ಇದರಿಂದ ಆತಂಕಗೊಂಡ ಸುಂದರ್ ಅವರು ಸರ್ವೋದಯ ಆಸ್ಪತ್ರೆ ಬಳಿ ಹೋಗಿ ನೋಡಿದಾಗ, ಅಪರಿಚಿತ ವ್ಯಕ್ತಿ ಮೊಬೈಲ್‌ನಲ್ಲಿ ಹೇಳಿದ್ದಂತೆ ಯಾವುದೇ ಘಟನೆಯೂ ನಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

`ಮನೆಯ ಬಳಿಯೇ ಇದ್ದ ಲಕ್ಷ್ಮಮ್ಮ, ಮಹಡಿಯಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆದುಕೊಂಡು ಬರಲು ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯ ಒಳ ಭಾಗದಲ್ಲೇ ಇದ್ದ ಆರೋಪಿಗಳು ಹೊರ ಬಂದು ಪರಾರಿಯಾಗಿರಬಹುದು. ಲಕ್ಷ್ಮಮ್ಮ ಬಟ್ಟೆ ತೆಗೆದುಕೊಂಡು ಮಹಡಿಯಿಂದ ಕೆಳಗಿಳಿದು ಬಂದಾಗ ಮನೆಯ ಬಾಗಿಲು ತೆರೆದಿತ್ತು. ಅವರು ಮನೆಯೊಳಗೆ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ~ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಸರ್ವೋದಯ ಆಸ್ಪತ್ರೆಯಿಂದ ಅಕ್ಕನ ಮನೆಗೆ ವಾಪಸ್ ಬಂದಾಗ ಲಕ್ಷ್ಮಮ್ಮ ಅಳುತ್ತಾ ಕುಳಿತಿದ್ದರು. ಒಳ ಹೋಗಿ ನೋಡಿದಾಗ ಅಕ್ಕ ನಡುಮನೆಯ ನೆಲದ ಮೇಲೆ ಬಿದ್ದಿದ್ದರು. ಅವರ ಬಾಯಿಗೆ ಟೇಪ್ ಸುತ್ತಲಾಗಿತ್ತು. ಕೂಡಲೇ ಆ ಟೇಪ್ ಕಿತ್ತು, ಸ್ನೇಹಿತರು ಹಾಗೂ ವೈದ್ಯರಿಗೆ ಕರೆ ಮಾಡಿದೆ. ಮನೆಗೆ ಬಂದ ವೈದ್ಯರು ಅಕ್ಕನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಹೇಳಿದರು ಎಂದು ಸುಂದರ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ~ ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಚಿತರಿಂದಲೇ ಕೃತ್ಯ
`ದುಷ್ಕರ್ಮಿಗಳು ಬಲವಂತವಾಗಿ ಮನೆಯನ್ನು ಪ್ರವೇಶಿಸಿಲ್ಲ. ಆದ್ದರಿಂದ ಪರಿಚಿತ ವ್ಯಕ್ತಿಗಳೇ ಈ ಕೊಲೆ ಮಾಡಿರುವ ಸಾಧ್ಯತೆ ಇದೆ. ಕೊಲೆಯಾದ ಸ್ಥಳದ ಬಳಿ ಇದ್ದ ಮೇಜಿನ ಮೇಲೆ ಕಾಫಿ ತುಂಬಿದ ಲೋಟ ಮತ್ತು ಬಿಸ್ಕೇಟ್‌ಗಳು ಇದ್ದವು. ಈ ಅಂಶವನ್ನು ಗಮನಿಸಿದರೆ ಸುಜಾತಾ ಅವರೇ, ಆ ವ್ಯಕ್ತಿಗಳಿಗೆ ಕಾಫಿ ಹಾಗೂ ಬಿಸ್ಕೇಟ್ ಕೊಟ್ಟಿದ್ದರು ಎಂದು ಗೊತ್ತಾಗುತ್ತದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.