ADVERTISEMENT

ಹೂ ಬಿಡದ ದಾಳಿಂಬೆ,ಇಳುವರಿ ನೀಡದ ಜೋಳ!

ಹವಾಮಾನ ವೈಪರಿತ್ಯದ ತೀವ್ರತೆ ಕಟ್ಟಿಕೊಟ್ಟ ವಿಜ್ಞಾನಿ * ಚಳಿ ಇಲ್ಲದೆ ಕೃಷಿ ಏರುಪೇರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:30 IST
Last Updated 21 ಫೆಬ್ರುವರಿ 2017, 19:30 IST
ಹೂ ಬಿಡದ ದಾಳಿಂಬೆ,ಇಳುವರಿ ನೀಡದ ಜೋಳ!
ಹೂ ಬಿಡದ ದಾಳಿಂಬೆ,ಇಳುವರಿ ನೀಡದ ಜೋಳ!   

ಬೆಂಗಳೂರು:  ಚಳಿ ಇಲ್ಲದೆ ಒಮನ್‌ನಲ್ಲಿ ದಾಳಿಂಬೆ ಗಿಡಗಳು ಹೂಬಿಡುತ್ತಿಲ್ಲ... ಸತತ ಬರಗಾಲದಿಂದ ಅಮೆರಿಕದಲ್ಲಿ ಮೆಕ್ಕೆಜೋಳ ಉತ್ಪಾದನೆ ಗಣನೀಯವಾಗಿ ಕುಸಿದಿದೆ.

ಹವಾಮಾನ ವೈಪರಿತ್ಯದಿಂದ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಆಹಾರ ಉತ್ಪಾದನೆ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಿವೆ ಎಂಬ ಚಿತ್ರಣವನ್ನು ಕಟ್ಟಿಕೊಡಲು ಜರ್ಮನಿಯ ಕಾಸೆಲ್‌ ವಿಜೆನ್‌ಹಾಸೆನ್‌ ವಿಶ್ವವಿದ್ಯಾಲಯದ  ವಿಜ್ಞಾನಿ ಡಾ.ಆಂಡ್ರಿಯಾಸ್‌ ಬರ್ಕೆಟ್‌  ಅವರು  ನೀಡಿದ ಉದಾಹರಣೆಗಳಿವು

13ನೇ ಕೃಷಿ ವಿಜ್ಞಾನ ಸಮ್ಮೇಳನದಲ್ಲಿ ಅವರು, ಹವಾಮಾನ ವೈಪರಿತ್ಯ ಹಾಗೂ ಆಹಾರ ಉತ್ಪಾದನೆ ನಡುವಿನ ಸಂಬಂಧದ ಕುರಿತು ಪ್ರಬಂಧ ಮಂಡಿಸಿದರು. 

‘ಒಮನ್‌ನಲ್ಲಿ  ದಾಳಿಂಬೆಯನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ದಾಳಿಂಬೆ ಹೂಬಿಡುವಲ್ಲಿ ಚಳಿಯ ಪಾತ್ರ ಮಹತ್ವದ್ದು. ಇಲ್ಲಿ ಚಳಿ ತೀವ್ರವಾಗಿ ಕಡಿಮೆ ಆಗುತ್ತಿದೆ. ಹಾಗಾಗಿ ಕೆಲವು ದಾಳಿಂಬೆ ತಳಿಗಳು ಹೂಬಿಡುವುದಕ್ಕೆ ಅಗತ್ಯ ಇರುವಷ್ಟು ಗಂಟೆಯ ಚಳಿ ಲಭ್ಯವಾಗುತ್ತಿಲ್ಲ. ಈ ದಾಳಿಂಬೆ ಗಿಡಗಳು ಮುಂದೆ ಹೂಬಿಡುವುದನ್ನೇ ನಿಲ್ಲಿಸಬಹುದು’ ಎಂದು ಡಾ.ಬರ್ಕೆಟ್‌ ಆತಂಕ ವ್ಯಕ್ತಪಡಿಸಿದರು.

‘ಭಾರತ ಮಾತ್ರ ಬರಗಾಲ ಎದುರಿಸುತ್ತಿಲ್ಲ. ಅಮೆರಿಕದ ಕೆಲವು ಪ್ರಾಂತ್ಯಗಳಲ್ಲೂ ಸತತ ಬರಗಾಲ ಕಾಡುತ್ತಿದೆ. ಇದರಿಂದ ಮೆಕ್ಕೆಜೋಳ ಉತ್ಪಾದನೆ ವರ್ಷದಿಂದ ವರ್ಷಕ್ಕೆ  ಕುಸಿತ ಕಾಣುತ್ತಿದೆ’ ಎಂದು ಅವರು ತಿಳಿಸಿದರು. 

‘ಭಾರತದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ಆಹಾರ ಸೇವನೆ ವಿಧಾನಗಳು ಬದಲಾಗಿವೆ. ಇದು ಪರೋಕ್ಷವಾಗಿ ಹವಾಮಾನ ವೈಪರಿತ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ವೈಪರಿತ್ಯಕ್ಕೆ ಕೃಷಿಯೂ ಕಾರಣವಾಗುತ್ತಿದೆ ಎಂಬ ಅಂಶ ಬಹುತೇಖ ಮಂದಿಗೆ ತಿಳಿದೇ ಇಲ್ಲ’ ಎಂದರು.

ಭಾರತದಲ್ಲೂ ರಾತ್ರಿ ಚಳಿ ಕೊರತೆ: ‘ಭಾರತದಲ್ಲಿ  ರಾತ್ರಿಯ ಉಷ್ಣಾಂಶ ಹೆಚ್ಚುತ್ತಿದೆ. ರಾತ್ರಿ ವೇಳೆ ಚಳಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ಬೆಳೆಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ನವದೆಹಲಿಯ ಭಾರತೀಯ ವಿಜ್ಞಾನ ಸಂಸ್ಥೆಯ ಹವಾಮಾನ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಎಸ್‌.ಕೆ.ದಾಸ್‌  ತಿಳಿಸಿದರು.

‘ಸತತ ಮಳೆ ಸುರಿಯುವ ದಿನಗಳು ಕಡಿಮೆ ಆಗುತ್ತಿದೆ. ದೇಶದ ಅನೇಕ ಕಡೆ ಮಳೆಗಾಲದುದ್ದಕ್ಕೂ ನಾಲ್ಕಕ್ಕೂ ಹೆಚ್ಚು ದಿನ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಆದರೆ, ಇತ್ತೀಚೆಗೆ ಬಿಟ್ಟು ಬಿಟ್ಟು ಮಳೆ ಬರುವುದು ಹೆಚ್ಚುತ್ತಿದೆ’ ಎಂದು ಅವರು ತಿಳಿಸಿದರು.

‘ತಂಪು ಕೊಡುವ ಉಷ್ಣವಲಯದ ಕಾಡು’
ವಾತಾವರಣದ ಉಷ್ಣಾಂಶವನ್ನು ಕಡಿಮೆ ಮಾಡುವಲ್ಲಿ ಉಷ್ಣವಲಯದ ಕಾಡುಗಳ ಮಹತ್ವವನ್ನು ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ಪರಿಸರ ವಿಜ್ಞಾನಿ ಡಾ.ಮಹೇಶ್‌ ಶಂಕರ್‌ ವಿವರಿಸಿದರು.

‘ತೀವ್ರ ಬರಗಾಲದಿಂದಾಗಿ ಅಮೆಜಾನ್‌ ಕಾಡಿನ ಬಹುಪಾಲು ನಾಶವಾಗಿದೆ. ಮಧ್ಯ ಆಫ್ರಿಕಾದ ದಟ್ಟ ಕಾಡು ಕೂಡಾ ನಶಿಸುತ್ತಿದೆ. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್‌ ಮರಳಿ ವಾತಾವರಣ ಸೇರಿದೆ’ ಎಂದು ಅವರು ತಿಳಿಸಿದರು. ‘ವಾತಾವರಣದಲ್ಲಿ ಇಂಗಾಲದ ಪ್ರಮಾಣ ನಿಯಂತ್ರಣದಲ್ಲಿ ಭಾರತದ ಉಷ್ಣವಲಯದ ಕಾಡುಗಳ ಕೊಡುಗೆ ಬಗ್ಗೆ  ಸರಿಯಾದ ಅಧ್ಯಯನ ನಡೆದಿಲ್ಲ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.