ADVERTISEMENT

ಹೆಣ್ಣೂರು: ಕುಡಿಯುವ ನೀರಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST
ಹೆಣ್ಣೂರು: ಕುಡಿಯುವ ನೀರಿಗಾಗಿ ಪರದಾಟ
ಹೆಣ್ಣೂರು: ಕುಡಿಯುವ ನೀರಿಗಾಗಿ ಪರದಾಟ   

ಯಲಹಂಕ: ಎಚ್‌ಬಿಆರ್ ಬಡಾವಣೆ (ವಾರ್ಡ್ ಸಂಖ್ಯೆ-24) ವ್ಯಾಪ್ತಿಯ ಹೆಣ್ಣೂರು ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಾಗರಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ಹೆಣ್ಣೂರು ಬಡಾವಣೆಯ ಸುತ್ತಮುತ್ತಲ ಪ್ರದೇಶಗಳಾದ ಭೈರವೇಶ್ವರ ಬಡಾವಣೆ, ಚಿಕ್ಕಣ್ಣ ಬಡಾವಣೆ, ಸೊಣ್ಣಪ್ಪ ಲೇಔಟ್, ವೀರಣ್ಣ ಗಾರ್ಡನ್ ಹಾಗೂ ಮುದ್ದಣ್ಣ ಬಡಾವಣೆಗಳಿಗೆ ಸಂಬಂಧಿಸಿದಂತೆ ಮೂರು ಕೊಳವೆ ಬಾವಿಗಳಿದ್ದು, ವಾರಕ್ಕೆ ಮೂರು ಅಥವಾ ನಾಲ್ಕು ಗಂಟೆಗಳ ಕಾಲ ಮಾತ್ರ ನೀರು ಪೂರೈಕೆಯಾಗುತ್ತಿದೆ; ಇದರಿಂದ ನಿತ್ಯವೂ ನೀರಿಗಾಗಿ ಪರದಾಡಬೇಕಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

`ವಾರದಲ್ಲಿ ಶುಕ್ರವಾರ ಮಾತ್ರ ಕೇವಲ ಅರ್ಧ ಗಂಟೆ ನೀರು ಸರಬರಾಜಾಗುತ್ತಿದ್ದು, ವಿದ್ಯುತ್ ಕೈಕೊಟ್ಟರೆ ಆ ನೀರೂ ಸಿಗುವುದಿಲ್ಲ. ಟ್ಯಾಂಕರ್‌ಗೆ 460 ರೂಪಾಯಿ ನೀಡಿ ನೀರನ್ನು ಕೊಂಡುಕೊಳ್ಳಬೇಕಾಗಿದೆ. ವಾಲ್ವ್‌ಮನ್‌ಗಳನ್ನು ಪ್ರಶ್ನಿಸಿದರೆ ವಿದ್ಯುತ್ ಕಡಿತ, ಪೈಪ್ ಹೊಡೆದಿದೆ, ಮೋಟಾರ್ ರಿಪೇರಿ ಎಂಬ ಸಬೂಬು ನೀಡುತ್ತಾರೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಬಡಾವಣೆಯ ಜನರೆಲ್ಲಾ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಮುದ್ದಣ್ಣ ಬಡಾವಣೆ ನಿವಾಸಿ ಉಷಾ ದೂರಿದರು.

ADVERTISEMENT

ದಿನದಲ್ಲಿ ಬೆಳಿಗ್ಗೆ, ಸಂಜೆ ಮುಕ್ಕಾಲು ಗಂಟೆ ಹಾಗೂ ಎರಡು ಗಂಟೆಗೊಮ್ಮೆ ಅರ್ಧ ಗಂಟೆ ವಿದ್ಯುತ್ ಕಡಿತವಾಗುತ್ತಿರುವುದರ ಜೊತೆಗೆ ವೋಲ್ಟೇಜ್ ಸಹ ಕಡಿಮೆಯಾಗಿರುವುದರಿಂದ ಕೊಳವೆ ಬಾವಿಗಳಿಂದ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಇದರಿಂದ ನೀರಿನ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎನ್.ಮುನಿರಾಜು ಆರೋಪಿಸಿದರು.

ಈ ಬಗ್ಗೆ ಬಿಬಿಎಂಪಿ ಸದಸ್ಯ ಗೋವಿಂದರಾಜು ಪ್ರತಿಕ್ರಿಯಿಸಿ `ವಾರ್ಡ್ ವ್ಯಾಪ್ತಿಯಲ್ಲಿ ಈ ವರ್ಷ ಹೊಸದಾಗಿ 10 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಬಹುದೆಂಬ ಮುನ್ಸೂಚನೆಯಿಂದ ಕಳೆದ ಫೆಬ್ರುವರಿಯಲ್ಲಿ ಹೆಣ್ಣೂರು ಬಡಾವಣೆ  ವ್ಯಾಪ್ತಿಯಲ್ಲೇ ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಹಿಂದೆ 350 ಅಡಿಗಳಷ್ಟಿದ್ದ ಅಂತರ್ಜಲ ಮಟ್ಟ ಇಂದು 1000 ಅಡಿಗಳಿಗೆ ಕುಸಿದಿದೆ. ಅಲ್ಲದೆ ವಿದ್ಯುತ್ ಕಡಿತದಿಂದ ಉಂಟಾಗುತ್ತಿರುವ ಸಮಸ್ಯೆಯಿಂದ ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರಬಹುದು. ಆದರೂ ಲಭ್ಯವಿರುವ ನೀರನ್ನು ಹಂಚಿಕೆ ಮಾಡಲಾಗುತ್ತಿದೆ. ಪಂಪಿಂಗ್ ಸ್ಟೇಷನ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡರೆ ಯಾವ ಮೂಲೆಗೆ ಬೇಕಾದರೂ ನೀರನ್ನು ತಲುಪಿಸಲು ಸಾಧ್ಯವಾಗುತ್ತದೆ~ ಎಂದರು.

ಈ ಬಗ್ಗೆ ಜಲಮಂಡಳಿಯ ಎಚ್‌ಬಿಆರ್ ಬಡಾವಣೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಲ್ಲಾರೆಡ್ಡಿ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಬೇಸಿಗೆ ಆರಂಭವಾಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ಕೆಲವು ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಲಭ್ಯವಿರುವ ನೀರನ್ನು ಹಂಚಲಾಗುತ್ತಿದೆ. ವಾಲ್ವ್‌ಮನ್‌ಗಳಿಂದ ನೀರಿನ ವಿತರಣೆಯಲ್ಲಿ ಸಮಸ್ಯೆಯುಂಟಾಗಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು~ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.