ಬೆಂಗಳೂರು: ಹೇಮಾವತಿ ನದಿ ಸಮೀಪ ಮದ್ಯಸಾರ ಘಟಕ ಮತ್ತು ಕಬ್ಬಿನ ಸಿಪ್ಪೆಯೊಂದಿಗೆ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಮುಂದಾಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕ್ರಮವನ್ನು ಖಂಡಿಸಿ ಹೇಮಾವತಿ ನದಿ ಉಳಿಸಿ ಆಂದೋಲನ, ಪರಿಸರ ಮಾಲಿನ್ಯ ವಿರೋಧಿ ನಾಗರಿಕ ವೇದಿಕೆ, ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಶುಕ್ರವಾರ ಪರಿಸರ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದಿಂದ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, ಪರಿಸರ ಭವನದ ಕಡೆಗೆ ಜಾಥಾ ಹೊರಟರು. ಈ ವೇಳೆ ಮಾರ್ಗಮಧ್ಯೆ ಅವರನ್ನು ಅಡ್ಡಗಟ್ಟಿದ ಪೊಲೀಸರು, `ಪರಿಸರ ಭವನದ ಬಳಿ ಪ್ರತಿಭಟನೆ ನಡೆಸಲು ಅನುಮತಿ ಇಲ್ಲ. ಹೀಗಾಗಿ ಪ್ರತಿಭಟನೆಯನ್ನು ಪುರಭವನದ ಸಮೀಪಕ್ಕೆ ಸ್ಥಳಾಂತರಿಸಿಕೊಳ್ಳಿ' ಎಂದು ಸೂಚಿಸಿದರು. ಇದರಿಂದಾಗಿ ಕೆಲ ಕಾಲ ಮೆಟ್ರೊ ನಿಲ್ದಾಣ ಸಮೀಪವೇ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂತರ ಪುರಭವನಕ್ಕೆ ತೆರಳಿ ಪ್ರತಿಭಟನೆ ಮುಂದುವರಿಸಿದರು.
ರಾಜ್ಯ ರೈತ ಸಂಘದ ಹಿರಿಯ ಕಾರ್ಯಕರ್ತ ರಾಜೇಗೌಡ ಮಾತನಾಡಿ, `ಬಿಸಿಸಿಐನ ಮಾಜಿ ಅಧ್ಯಕ್ಷ ಮಂಡ್ಯ ಜಿಲ್ಲೆಯಲ್ಲಿ ನಡೆಸುತ್ತಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯಿಂದ ಈಗಾಗಲೇ ತೀವ್ರ ಪ್ರಮಾಣದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಥಳ ಪರಿಶೀಲನೆ ನಡೆಸಿ ಕಾರ್ಖಾನೆ ಯಿಂದ ಆಗುತ್ತಿರುವ ಅನಾನುಕೂಲಗಳ ಬಗ್ಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ, ನೋಟಿಸ್ ನೀಡಿ ವರ್ಷ ಕಳೆದರೂ ಕಾರ್ಖಾನೆಯ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗ ಅದೇ ಕಾರ್ಖಾನೆಯ ಕಲ್ಲಿದ್ದಲನ್ನು ಬಳಸಿ ಹೇಮಾವತಿ ನದಿ ಸಮೀಪವೇ ವಿದ್ಯುತ್ ಘಟಕ ಆರಂಭಿಸುವ ಪ್ರಯತ್ನ ನಡೆಯುತ್ತಿದೆ' ಎಂದು ಆರೋಪಿಸಿದರು.
ಮದ್ಯಸಾರ ಘಟಕ ಆರಂಭವಾದರೆ ಸುತ್ತಮುತ್ತಲ 10 ಕಿ.ಮೀ ವರೆಗೆ ದುರ್ನಾತ ಬೀರುವುದಲ್ಲದೇ, ಇಂಗಾಲ, ಗಂಧಕದ ಡೈಆಕ್ಸೈಡ್ ಗಾಳಿಯೊಂದಿಗೆ ಸೇರಿಕೊಳ್ಳುತ್ತದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಉಸಿರಾಟದ ತೊಂದರೆ ಮತ್ತು ಆಸ್ತಮಾ ಕಾಯಿಲೆಗಳಿಂದ ಬಳಲಬೇಕಾಗುತ್ತದೆ. ಅಲ್ಲದೇ, ಈ ವಿಷಪೂರಿತ ಗಾಳಿಯಿಂದ ವೀಳ್ಯದ ಎಲೆ, ಅಡಿಕೆ, ತೆಂಗು, ಮಾವು, ಹುಣಸೆ ಸೇರಿದಂತೆ ಸೂಕ್ಷ್ಮ ಬೆಳೆಗಳು ಹಾಳಾಗುತ್ತವೆ ಎಂದರು.
`ಈ ಎರಡು ಘಟಕಳಿಗೆ ವಾರ್ಷಿಕ ಕನಿಷ್ಠ ಒಂದು ಟಿಎಂಸಿ ನೀರಿನ ಅಗತ್ಯವಿದ್ದು, ಮಂದಗೆರೆ ಎಡದಂಡೆ ಮತ್ತು ಬಲದಂಡೆ ನಾಲೆಗಳ ನೀರು ಸರಬರಾಜು ಕಡಿತಗೊಂಡು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಈ ಅಪಾಯಗಳನ್ನು ಗಮನದಲ್ಲಿಟ್ಟು ಕೊಂಡು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ರೈತ ವಿರೋಧಿಯಾದ ಈ ಘಟಕಗಳನ್ನು ಆರಂಭಿಸಲು ಅವಕಾಶ ನೀಡಬಾರದು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, `ಮದ್ಯಸಾರ ಘಟಕ ಸ್ಥಾಪನೆಯನ್ನು ಶಾಶ್ವತವಾಗಿ ಕೈಬಿಡಬೇಕು. ಜತೆಗೆ, ಕಬ್ಬಿನ ಸಿಪ್ಪೆ ಆಧಾರಿತ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕಲ್ಲಿದ್ದಲು ಬಳಸುವುದನ್ನು ನಿಷೇಧಿಸಬೇಕು ಹಾಗೂ ಕಲ್ಲಿದ್ದಲಿಗೆ ಪರ್ಯಾಯವಾಗಿ ತೆಂಗಿನ ಉಪ-ಉತ್ಪನ್ನಗಳಾದ ತೆಂಗಿನ ಗರಿ, ಗೊದಮೊಟ್ಟೆ, ಕಾಯಿಸಿಪ್ಪೆಗಳನ್ನು ಬಳಸಬೇಕು. ಇದರಿಂದ ಕಾರ್ಖಾನೆಯ ಸುತ್ತಮುತ್ತಲ ಕೃಷ್ಣರಾಜಪೇಟೆ, ಚನ್ನರಾಯಪಟ್ಟಣ ಹಾಗೂ ನಾಗಮಂಗಲ ತಾಲ್ಲೂಕುಗಳ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ. ನಮ್ಮ ಈ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.