ADVERTISEMENT

ಹೈಕೋರ್ಟ್‌ ಮುಖ್ಯದ್ವಾರವನ್ನು ಬಳಕೆಗೆ ಮುಕ್ತಗೊಳಿಸಿ: ಸುಬ್ಬಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಬೆಂಗಳೂರು: ‘ಹೈಕೋರ್ಟ್ ಮುಂಭಾಗದಲ್ಲಿ ಆರು ವರ್ಷದ ಹಿಂದೆ ಹೊಸದಾಗಿ ನಿರ್ಮಿಸಿರುವ ಮುಖ್ಯದ್ವಾರವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು’ ಎಂದು ಕರ್ನಾಟಕ ವಕೀಲರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಅವರು ಒತ್ತಾಯಿಸಿದರು.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭದ್ರತೆಯ ನೆಪವೊಡ್ಡಿ  ಮುಖ್ಯದ್ವಾರವನ್ನು ಮುಚ್ಚಲಾಗಿದೆ. ಇದರಿಂದಾಗಿ ಕಕ್ಷಿದಾರರು ಮತ್ತು ವಕೀಲರು ಕೋರ್ಟ್‌ಗೆ ಸುತ್ತಿಕೊಂಡು ಬರಬೇಕಿದೆ. ಹಾಗಾಗಿ ಮುಖ್ಯ ನ್ಯಾಯಮೂರ್ತಿಗಳು ದ್ವಾರವನ್ನು ಬಳಕೆಗೆ ಮುಕ್ತಗೊಳಿಸಲು ಸೂಚಿಸಬೇಕು’ ಎಂದು ಅವರು ಹೇಳಿದರು.

‘ಹೈಕೋರ್ಟ್‌ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ನ್ಯಾಯದಾನ ವಿಳಂಬವಾಗುತ್ತಿದ್ದು, ಕೂಡಲೇ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ತಿಳಿಸಿದರು.

‘ಹೈಕೋರ್ಟ್‌ನಲ್ಲಿ ಕೆಲ ನ್ಯಾಯಮೂರ್ತಿಗಳು ಕಕ್ಷಿದಾರರ ಮೇಲೆ ಹೆಚ್ಚಿನ ದಂಡ ವಿಧಿಸುತ್ತಿದ್ದಾರೆ. ಕೆಲವೊಮ್ಮೆ ಇದು ಸಮರ್ಥನೀಯವಾದರೂ, ದಂಡದ ಭಯದಿಂದ ಕಕ್ಷಿದಾರರು ನ್ಯಾಯ ಕೋರುವುದಕ್ಕೆ ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ. ಮುಖ್ಯ ನ್ಯಾಯಮೂರ್ತಿಗಳು ಈ ಕುರಿತು ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.